ಬಳ್ಳಾರಿ: ಮೆದುಳಿನ ಆರೋಗ್ಯದ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಪಾರ್ಶ್ವವಾಯು ಸಂಭವಿಸಿದ ಮೂರ್ನಾಲ್ಕು ಗಂಟೆಯೊಳಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಹಾಗೂ ಜಿಲ್ಲಾ ಮೆದುಳಿನ ಆರೋಗ್ಯ ಕೇಂದ್ರ ಸಹಯೋಗದಲ್ಲಿ ನಗರದ ಜಿಲ್ಲಾಸ್ಪತ್ರೆ ಆವರಣದ ಮೆದುಳಿನ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಪಾರ್ಶ್ವವಾಯು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ದೈಹಿಕ ಬಲಹೀನತೆ, ಮೆದುಳು ನಿಷ್ಕ್ರಿಯತೆ, ಮಾತು ತೊದಲಿಕೆ, ಆಹಾರ ಸೇವನೆಗೆ ತೊಡಕು, ದೃಷ್ಟಿದೋಷ, ಬಾಯಿ ಸೊಟ್ಟಗಾಗುವುದು ಈ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಪಾರ್ಶ್ವವಾಯು ಸಂಭವಿಸಿದಾಗ ನಾಟಿ ಔಷಧಿಗೆ ಮೊರೆ ಹೋಗಬಾರದು. ಬದಲಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಆಧುನಿಕ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿಯೇ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಜೀವನ ಶೈಲಿಯ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಯಮಿತ ಆಹಾರ ಸೇವನೆ, ಯೋಗ-ವ್ಯಾಯಾಮ, ಸಂಗೀತ ಆಲಾಪನೆ ಸೇರಿದಂತೆ ಇತರೆ ಕ್ರಿಯಾಶೀಲ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಶಿಸ್ತಿನ ಜೀವನ ರೂಪಿಸಿಕೊಳ್ಳಬೇಕು. ನಮ್ಮ ಜೀವನ ಶೈಲಿ ಸಹ ನಮ್ಮ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ ಎನ್. ಮಾತನಾಡಿ, ಅಧಿಕ ರಕ್ತದೊತ್ತಡ, ಹೆಚ್ಚಿನ ಮಧುಮೇಹ, ತಲೆಸುತ್ತು, ರಕ್ತ ಪರಿಚಲನೆಯಲ್ಲಿ ಬದಲಾವಣೆ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ರೋಗಮುಕ್ತರಾಗಬೇಕು ಎಂದು ಹೇಳಿದರು.ಉತ್ತಮ ಆರೋಗ್ಯ ಹೊಂದಲು ಮದ್ಯ ಸೇವನೆ, ಧೂಮಪಾನ ವ್ಯಸನದಿಂದ ದೂರವಿರಬೇಕು. ಪಾರ್ಶ್ವವಾಯುಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಸಹ ಮೂಡಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪಾರ್ಶ್ವವಾಯು ಕಾಯಿಲೆ ಕುರಿತ ಜಾಗೃತಿ ಮೂಡಿಸುವ ಕಿರುನಾಟಕವನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಪ್ರದರ್ಶಿಸಿದರು.ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ವಿಶ್ವನಾಥ ಕೆ., ಜಿಲ್ಲಾಸ್ಪತ್ರೆಯ ವಿಭಾಗೀಯ ಮುಖ್ಯಸ್ಥ ಡಾ. ಯೋಗಾನಂದ ರೆಡ್ಡಿ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದ ತಜ್ಞ ವೈದ್ಯ ಹಾಗೂ ನೋಡಲ್ ಅಧಿಕಾರಿ ಡಾ. ರಾಕೇಶ್, ಜಿಲ್ಲಾ ಆಸ್ಪತ್ರೆಯ ಶುಶ್ರೂಷಾಧೀಕ್ಷಕಿ ವಿಮಲಾಕ್ಷಿ, ನರರೋಗ ತಜ್ಞರಾದ ಕಮಾಲ್ ಕುಮಾರ್ ಜೈನ್, ಪೈಥಾಲಾಜಿಸ್ಟ್ ಉದಯ್ ಶಂಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಣ್ಣಕೇಶವ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಬಳ್ಳಾರಿಯಲ್ಲಿ ಜರುಗಿದ ವಿಶ್ವ ಪಾರ್ಶ್ವವಾಯು ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಮಾತನಾಡಿದರು.