ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ದರ ಶೇ.15 ಏರಿಕೆಯ ಶಾಕ್‌

KannadaprabhaNewsNetwork |  
Published : Jan 05, 2025, 01:34 AM ISTUpdated : Jan 05, 2025, 06:48 AM IST
ಕೆಎಸ್‌ಆರ್‌ಟಿಸಿ | Kannada Prabha

ಸಾರಾಂಶ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಹೆಚ್ಚಳವಾಗಿದೆ. ಬಿಎಂಟಿಸಿಯ ಸಾಮಾನ್ಯ ಬಸ್‌ ದರ 1 ರು.ನಿಂದ 6 ರು.ವರೆಗೆ ಹೆಚ್ಚಳವಾಗಿದ್ದರೆ, ಉಳಿದ ಮೂರು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳ ಪ್ರಯಾಣ ದರ 7 ರು.ನಿಂದ 115 ರು.ವರೆಗೆ ಏರಿಕೆಯಾಗಿದೆ.

  ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಹೆಚ್ಚಳವಾಗಿದೆ. ಬಿಎಂಟಿಸಿಯ ಸಾಮಾನ್ಯ ಬಸ್‌ ದರ 1 ರು.ನಿಂದ 6 ರು.ವರೆಗೆ ಹೆಚ್ಚಳವಾಗಿದ್ದರೆ, ಉಳಿದ ಮೂರು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳ ಪ್ರಯಾಣ ದರ 7 ರು.ನಿಂದ 115 ರು.ವರೆಗೆ ಏರಿಕೆಯಾಗಿದೆ.

ಬಿಎಂಟಿಸಿಯಲ್ಲಿ 10 ವರ್ಷಗಳ ನಂತರ ಹಾಗೂ ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಲ್ಲಿ 5 ವರ್ಷಗಳ ನಂತರ ಬಸ್‌ ಪ್ರಯಾಣ ದರ ಹೆಚ್ಚಳವಾಗಿದೆ. ಶೇ.15ರಷ್ಟು ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿ ಶನಿವಾರ ರಾಜ್ಯ ಸರ್ಕಾರ ಅಧಿಕೃತ ಆದೇಶ ಮಾಡಿದೆ.

ಅದರಂತೆ ನಾಲ್ಕೂ ನಿಗಮಗಳ ಹವಾನಿಯಂತ್ರಿತವಲ್ಲದ ಬಸ್‌ ಸೇವೆಗಳ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ.

ಶೇ.42ರಷ್ಟು ದರ ಏರಿಕೆ ಪ್ರಸ್ತಾಪ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಉತ್ತಮ ಬಸ್‌ ಸೇವೆ ನೀಡುವುದು ಸೇರಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಳೆದ ಕೆಲ ತಿಂಗಳ ಹಿಂದೆಯೇ ಪ್ರಯಾಣ ದರ ಏರಿಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಶೇ.33ರಷ್ಟು ಹಾಗೂ ಬಿಎಂಟಿಸಿ ಪ್ರಯಾಣ ದರ ಶೇ.42ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಲು ಕೋರಿದ್ದವು. ಆದರೆ, ಅದರಲ್ಲಿ ಶೇ.15ರಷ್ಟು ಬಸ್‌ ಪ್ರಯಾಣ ದರಕ್ಕೆ ಅನುಮತಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

78 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ:

ಪ್ರಯಾಣ ದರ ಹೆಚ್ಚಳದಿಂದಾಗಿ ನಾಲ್ಕೂ ನಿಗಮಗಳಿಗೆ ಮಾಸಿಕ 78 ಕೋಟಿ ರು. ಹಾಗೂ ವಾರ್ಷಿಕ 930 ಕೋಟಿ ರು. ಹೆಚ್ಚುವರಿ ಆದಾಯದ ನಿರೀಕ್ಷೆ ಹೊಂದಲಾಗಿದೆ. ಅದರಲ್ಲೂ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆಗಳಿವೆ.

ಎಸಿ ಬಸ್‌ ದರ ಏರಿಕೆ ಶೇ.15ಕ್ಕಿಂತ ಅಧಿಕ

ಹವಾನಿಯಂತ್ರಿತ ಬಸ್‌ ಸೇವೆಗಳ ಪ್ರಯಾಣ ದರ ಶೇ.15ರ ಜತೆಗೆ ಜಿಎಸ್‌ಟಿ, ಟೋಲ್‌ ಶುಲ್ಕವನ್ನೂ ಸೇರಿಸಿ ಹೆಚ್ಚಿಸಲಾಗಿದೆ. ಇದರಿಂದಾಗಿ ಸಾಮಾನ್ಯ ಮತ್ತು ಡಿಲಕ್ಸ್‌ ಬಸ್‌ಗಳಿಗೆ ಹೋಲಿಸಿದರೆ ಎಸಿ ಬಸ್‌ಗಳ ಪ್ರಯಾಣ ದರ ಶೇ. 15ಕ್ಕಿಂತ ಹೆಚ್ಚಿಗೆ ಏರಿಕೆಯಾದಂತಾಗಿದೆ.

ಬೆಂಗಳೂರಿಂದ ಬೀದರ್‌ಗೆ ₹115 ಹೆಚ್ಚಳ: ಅತಿ ಗರಿಷ್ಠ

ಕೆಎಸ್ಸಾರ್ಟಿಸಿ ಬಿಡುಗಡೆ ಮಾಡಿರುವ ರೇಟ್‌ ಚಾರ್ಟ್‌ ಪ್ರಕಾರ ಬೆಂಗಳೂರಿನಿಂದ ಬೀದರ್‌ಗೆ ಇರುವ ದರವನ್ನು 115 ರು.ನಷ್ಟು ಹೆಚ್ಚಿಸಲಾಗಿದೆ. ಇದು ಒಟ್ಟಾರೆ ದರ ಏರಿಕೆಯಲ್ಲೇ ಅತಿ ಗರಿಷ್ಠ ಏರಿಕೆ.

8 ತಿಂಗಳಲ್ಲಿ 1,093 ಕೋಟಿ ರು. ನಿವ್ವಳ ಕೊರತೆ

ನಾಲ್ಕೂ ನಿಗಮಗಳು 2024ರ ಡಿ. 31ರ ಅಂತ್ಯಕ್ಕೆ 6,520.14 ಕೋಟಿ ರು. ಆರ್ಥಿಕ ಹೊಣೆಗಾರಿಕೆ ಹೊಂದಿವೆ. ಅಲ್ಲದೆ, 2024ರ ಏಪ್ರಿಲ್‌ 1ರಿಂದ ನವೆಂಬರ್‌ 30ರವರೆಗೆ 8,418.46 ಕೋಟಿ ರು. ಆದಾಯ ಬಂದಿದೆ. ಆದರೆ, ಅದೇ ಅವಧಿಯಲ್ಲಿ 9,511.41 ಕೋಟಿ ರು. ವೆಚ್ಚವಾಗಿದೆ. ಒಟ್ಟಾರೆ 8 ತಿಂಗಳಲ್ಲಿ 1,092.95 ಕೋಟಿ ರು. ನಿವ್ವಳ ಆದಾಯ ಕೊರತೆಯನ್ನು ನಿಗಮಗಳು ಹೊಂದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ