ರಸ್ತೆಗಿಳಿಯದ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು: ಜನರ ಪರದಾಟ

KannadaprabhaNewsNetwork |  
Published : Aug 05, 2025, 11:45 PM IST
೫ಕೆಎಂಎನ್‌ಡಿ-೧೧ಪಾಂಡವಪುರ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧವಾಗಿ ನಿಂತಿರುವ ಖಾಸಗಿ ಬಸ್ಸುಗಳು. | Kannada Prabha

ಸಾರಾಂಶ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಾಂಡವಪುರದಲ್ಲಿ ಮಂಗಳವಾರ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಾಂಡವಪುರದಲ್ಲಿ ಮಂಗಳವಾರ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಸಾರಿಗೆ ನೌಕರರ ೩೮ ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಕಳೆದ ೨೦೨೪ರ ಜ.೧ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಖಾಸಗೀಕರಣ ನಿಲ್ಲಬೇಕು. ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಸಬೇಕು. ವಿದ್ಯುತ್‌ಚಾಲಿತ ಬಸ್‌ನಲ್ಲೂ ಸಾರಿಗೆ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಮುಷ್ಕರ ಕೈಗೊಂಡಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಪಾಂಡವಪುರ ಸಾರಿಗೆ ಬಸ್ ನಿಲ್ದಾಣದಿಂದ ಬಸ್ ಹೊರಡದ ಕಾರಣ ಖಾಸಗಿ ವಾಹನಗಳು ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಮೈಸೂರು, ಮಂಡ್ಯ ಕಡೆಗೆ ಕರೆದೊಯ್ದರು. ಕೆಲ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಶಕ್ತಿ ಯೋಜನೆಯ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಹಣ ತಂದಿಲ್ಲದ ಕಾರಣ ಮನೆಗೆ ವಾಪಸ್ಸಾದರು. ದೂರದ ಪ್ರಯಾಣ ಬೆಳೆಸಬೇಕಾದವರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮುಷ್ಕರದ ಮಾಹಿತಿ ಲಭ್ಯವಿಲ್ಲದೇ ಬಸ್ ನಿಲ್ದಾಣದಲ್ಲೆ ಕಾದು ಕುಳಿತಿದ್ದ ಸನ್ನಿವೇಶ ಸೃಷ್ಟಿಯಾಗಿತ್ತು.

ಬಸ್‌ಗಾಗಿ ಕಾದು ಬೇಸತ್ತ ಕೆಲವರು ಪ್ಯಾಸೆಂಜರ್ ಆಟೋ ಹಾಗೂ ಗೂಡ್ಸ್ ಆಟೋಗಳಲ್ಲಿ ಕುರಿ ಮಂದೆಯಂತೆ ಪ್ರಯಾಣಿಸಬೇಕಾಯಿತು. ಮುಷ್ಕರ ಹಿನ್ನೆಲೆಯಲ್ಲಿ ಬಸ್‌ಗಳನ್ನು ಬಸ್ ಡಿಪೋ ಹಾಗೂ ಬಸ್‌ ನಿಲ್ದಾಣಗಳಲ್ಲೇ ನಿಲುಗಡೆ ಮಾಡಲಾಗಿತ್ತು. ಕೆಲವು ದೂರದ ಬಸ್‌ಗಳು ಚಿತ್ರದುರ್ಗ, ಹೊಸದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹುಬ್ಬಳ್ಳಿ ಕಡೆ ಹೊರಡುವ ಬಸ್‌ಗಳು ಅಲ್ಲೊಂದು ಇಲ್ಲೊಂದು ಎಂಬಂತೆ ಸಂಚರಿಸುತ್ತಿದ್ದವು.

ಒಟ್ಟಾರೆ ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಾಕಷ್ಟು ತೊಂದರೆಗೊಳಗಾದರು. ಸಾರ್ವಜನಿಕರು, ಸರ್ಕಾರಿ ನೌಕರರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮುಷ್ಕರದ ಬಿಸಿ ತಟ್ಡಿತ್ತು.ಮುಷ್ಕರದ ಮಾಹಿತಿ ತಿಳಿದಿದ್ದವರು ಮನೆಯಲ್ಲೇ ಉಳಿದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ