ಭರ್ಜರಿ ಮಳೆಗೆ ಭರ್ತಿಯತ್ತ ರಾಜ್ಯದ ಅಣೆಕಟ್ಟೆಗಳು

KannadaprabhaNewsNetwork |  
Published : Jun 29, 2025, 01:32 AM ISTUpdated : Jun 29, 2025, 08:40 AM IST
ಬಸವಸಾಗರ ಡ್ಯಾಂ | Kannada Prabha

ಸಾರಾಂಶ

ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭರ್ಜರಿ ನೀರು ಹರಿದುಬರುತ್ತಿದೆ.

 ಬೆಂಗಳೂರು :  ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭರ್ಜರಿ ನೀರು ಹರಿದುಬರುತ್ತಿದೆ. ಸಣ್ಣ ಪುಟ್ಟ ಜಲಾಶಯಗಳು ಈಗಾಗಲೇ ತುಂಬಿವೆ. ಪ್ರಮುಖ ಜಲಾಶಯಗಳನ್ನು ಸುರಕ್ಷತೆಯ ದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ತುಂಬಿಸದೆ ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ. ಜೂನ್‌ ತಿಂಗಳಿನಲ್ಲಿಯೇ ಯಥೇಚ್ಚ ನೀರು ಹರಿದು ಬರುತ್ತಿರುವುದು ರಾಜ್ಯದ ಅಣೆಕಟ್ಟೆಗಳ ಇತಿಹಾಸದಲ್ಲಿಯೇ ಹಲವು ದಾಖಲೆಗಳನ್ನು ನಿರ್ಮಿಸುತ್ತಿದೆ.

ರಾಜ್ಯದ ಜೀವನಾಡಿ ಕಾವೇರಿ ನದಿಗೆ ಮಂಡ್ಯದ ಶ್ರೀರಂಗಪಟ್ಟಣ ಬಳಿ ನಿರ್ಮಿಸಿರುವ ಕೆಆರ್‌ಎಸ್‌ ಜಲಾಶಯ ತುಂಬಲು ಕೇವಲ 1 ಅಡಿ ಮಾತ್ರ ಬಾಕಿ ಇದೆ. ಇನ್ನು ಈಗಾಗಲೇ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದರೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಸನದ ಹೇಮಾವತಿ, ಕೊಡಗಿನ ಹಾರಂಗಿಗಳನ್ನು ಪೂರ್ತಿ ತುಂಬಿಸದೆ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. 

ಹಾಗಾಗಿ ಎಲ್ಲ ಗೇಟುಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಕಟ್ಟಿರುವ ಮತ್ತೊಂದು ಡ್ಯಾಂ ನಾರಾಯಣಪುರದ ಬಸವ ಸಾಗರ ಜಲಾಶಯದ 30 ಕ್ರಸ್ಟ್‌ಗೇಟುಗಳ ಮೂಲಕ 1.10 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಇನ್ನು 19ನೇ ಕ್ರಸ್ಟ್‌ ಗೇಟ್‌ ತುಂಡಾಗಿ ಕಳೆದ ವರ್ಷ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯಲ್ಲಿರುವ ತುಂಗಾಭದ್ರ ಅಣೆಕಟ್ಟೆಯಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಹೆಚ್ಚಿನ ನೀರನ್ನು ನದಿಗೆ ಯಾವುದೇ ಕ್ಷಣದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಜೀವನಾಡಿ ಕಾವೇರಿ ನದಿಗೆ ನಿರ್ಮಿಸಲಾಗಿರುವ ಕೃಷ್ಣರಾಜ ಸಾಗರ ಜಲಾಶಯ ಜೂನ್‌ ತಿಂಗಳಿನಲ್ಲಿಯೇ ತುಂಬಿರುವುದು ಸಾರ್ವತ್ರಿಕ ದಾಖಲೆ ಆಗಲಿದೆ. ಈಗಾಗಲೇ 123 ಅಡಿ ತುಂಬಿದೆ. ಇದಕ್ಕೆ ನಾಳೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲಿದ್ದಾರೆ. ಜಲಾಶಯಕ್ಕೆ ೭೩,೮೧೧ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ೩೮,೯೮೩ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ 30853 ಕ್ಯುಸೆಕ್ ಒಳ ಹರಿವು ಇದ್ದು, 30000 ಕ್ಯುಸೆಕ್‌ ಹೊರ ಹರಿಸಲಾಗುತ್ತಿದೆ. ಹಾರಂಗಿಗೆ ಒಳಹರಿವು 4,592 ಕ್ಯುಸೆಕ್, ಇದ್ದು, ನದಿಗೆ 6500 ಕ್ಯುಸೆಕ್ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 24,752 ಕ್ಯುಸೆಕ್ ಒಳಹರಿವು ಇದ್ದು, ನದಿಗೆ ನೀರು ಬಿಡುತ್ತಿಲ್ಲ. ಭದ್ರಾಗೆ ಒಳಹರಿವು 21139 ಕ್ಯುಸೆಕ್ ಇದ್ದು, ಕೇವಲ 1290 ಕ್ಯುಸೆಕ್‌ ಹೊರ ಹರಿಯುತ್ತಿದೆ.

ಇನ್ನು ಬಸವಸಾಗರ ಜಲಾಶಯಕ್ಕೆ 1.10 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದು, ಎಲ್ಲಾ 30 ಗೇಟ್‌ಗಳಿಂದ 78,445 ಕ್ಯೂಸೆಕ್, ಎಂಪಿಸಿಎಲ್‌ನಿಂದ 6 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟಾರೆಯಾಗಿ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಸುಮಾರು 1.10 ಕ್ಯುಸೆಕ್‌ ನೀರನ್ನು ಶನಿವಾರ ಹರಿದು ಬಿಡಲಾಗಿದೆ. ಇದೀಗ ಒಂದು ಲಕ್ಷಕ್ಕು ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿ ಮುಖಾಂತರ ನೀರನ್ನು ಹೊರಗಡೆ ಬಿಡಲಾಗುತ್ತಿದೆ.

PREV
Read more Articles on

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!