ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭ ಅನಾವರಣ

KannadaprabhaNewsNetwork |  
Published : Oct 03, 2026, 04:00 AM IST
Arts College

ಸಾರಾಂಶ

ಗಾಂಧೀಜಿ ಭೇಟಿ ನೀಡಿದ್ದ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಾವರಣಗೊಳಿಸಿದರು.

ಬೆಂಗಳೂರು : ಗಾಂಧೀಜಿ ಭೇಟಿ ನೀಡಿದ್ದ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ತ್ಯಾಗ ಮತ್ತು ಅಹಿಂಸೆಯ ಪ್ರತಿರೂಪವಾದ ಮಹಾತ್ಮರ ವಿಚಾರಧಾರೆಗಳನ್ನು ಜೀವಂತವಾಗಿಡುವ ಸರ್ಕಾರದ ಮಹತ್ವದ ಹೆಜ್ಜೆಯಾಗಿ ರಾಜ್ಯದ 87 ಸ್ಥಳಗಳಲ್ಲಿ ಸ್ತಂಭ ಸ್ಥಾಪನೆ ಮಾಡಲಾಗುತ್ತಿದೆ. ಇದು ಯುವಪೀಳಿಗೆಗೆ ಸತ್ಯ-ಶಾಂತಿಯ ಸಂದೇಶ ಸಾರಲಿದೆ ಎಂದು ಡಿ.ಕೆ. ಹೇಳಿದರು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರೈಸಿದ ನೆನಪಿಗಾಗಿ ‘ಗಾಂಧಿ ಭಾರತ’ ಅಭಿಯಾನದಡಿಯಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸ್ಮಾರಕ ಸ್ತಂಭಗಳನ್ನು ನಿರ್ಮಿಸುತ್ತಿದೆ.

ಸ್ತಂಭ ಸಿದ್ದಡಿಸಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ನಾಗೇಂದ್ರ ಕುಮಾರ್ ಜಿ.ಸಿ. ನಿರ್ಮಿತಿ ಕೇಂದ್ರದ ಅಭಿಯಂತರರಾದ ರಾಜೀವ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್, ಆಯುಕ್ತ ಎಂ.ಎನ್.ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.

ಭಾವಚಿತ್ರ ಅನಾವರಣಗೊಳಿಸಿದ್ದ ಗಾಂಧಿ

ಮಹಾತ್ಮ ಗಾಂಧೀಜಿ ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ 1915ರ ಮೇ 8ರಂದು ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಆಗಿನ ಸರ್ಕಾರಿ ಪ್ರೌಢಶಾಲೆಗೆ (ಇಂದಿನ ಸರ್ಕಾರಿ ಕಲಾ ಕಾಲೇಜು) ಭೇಟಿ ನೀಡಿ, ತಮ್ಮ ರಾಜಕೀಯ ಗುರುಗಳಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಅದರ ನೆನಪಿಗಾಗಿ ಈ ಸಭಾಂಗಣಕ್ಕೆ ಬಾಪೂಜಿ ಅವರ ಹೆಸರು ಇರಿಸಲಾಗಿದ್ದು, ಈಗ ಇದೇ ಆವರಣದಲ್ಲಿ ಮೊದಲ ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲಾಗಿದೆ.

ಸ್ಮಾರಕ ಸ್ತಂಭದ ವಿವರ

ಸ್ಮಾರಕವು 10 ಅಡಿ ಎತ್ತರ ಹಾಗೂ ಮೂರು ಕಾಲು ಅಡಿ ಅಗಲದ ಏಕಶಿಲಾ ಗ್ರಾನೈಟ್ ಕಲಾಕೃತಿ ಹೊಂದಿದೆ. ಸ್ತಂಭದ ಮೇಲ್ಭಾಗದಲ್ಲಿ ನಾಲ್ಕು ಮುಖ ಸಿಂಹವುಳ್ಳ ರಾಷ್ಟ್ರೀಯ ಲಾಂಛನ, ಅದರ ಕೆಳಗೆ ಅಶೋಕ ಚಕ್ರ, ಧ್ಯಾನಸ್ಥ ಮಹಾತ್ಮ ಗಾಂಧೀಜಿ, ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳು, ಗಾಂಧೀಜಿಯವರ ಸಹಿ ಹಾಗೂ ಚರಕದ ಚಿತ್ರಣವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

50 ಲಕ್ಷ ಮತ ಡಿಲೀಟ್‌ ಯತ್ನ ಬಗ್ಗೆ ದಾಖಲೆ ಕೊಡಿ: ಬಿವೈವಿ
ಎಸ್ಐಆರ್‌ ಅಕ್ರಮ ತನಿಖೆಗೆ ಎಸ್‌ಐಟಿ ? - ಮುಂದಿನ ಸಂಪುಟ ಸಭೇಲಿ ಚರ್ಚೆ ಸಂಭವ