ಮೆಟ್ರೋ ನಿಲ್ದಾಣಕ್ಕೆ ರಾಜ್ಯದ ಗ್ರಾನೈಟ್: ಡಿಕೆಶಿ

KannadaprabhaNewsNetwork |  
Published : Nov 15, 2026, 02:00 AM IST
ಗ್ರಾಮೀಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನಜಾತ್ರೆ ಸಹಕಾರಿ: ಸಚಿವ ಮಧು ಬಂಗಾರಪ್ಪ | Kannada Prabha

ಸಾರಾಂಶ

ನಮ್ಮ ಮೆಟ್ರೋ ನಿರ್ಮಾಣದಲ್ಲಿ ನಮ್ಮ ರಾಜ್ಯದಲ್ಲಿಯೇ ದೊರೆಯುವ ಗ್ರಾನೈಟ್ ಕಲ್ಲುಗಳನ್ನೇ ಬಳಸಲಾಗಿದೆ. ಹೀಗೆಯೇ ಬಳಸಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಹೇಳಿದ್ದೆ, ಅದರಂತೆ ಮೆಟ್ರೋ ಕಟ್ಟಡಗಳಲ್ಲಿ ನಮ್ಮ ರಾಜ್ಯದ ಕಲ್ಲುಗಳೇ ಮಿಂಚುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬಹಿರಂಗಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ನಿರ್ಮಾಣದಲ್ಲಿ ನಮ್ಮ ರಾಜ್ಯದಲ್ಲಿಯೇ ದೊರೆಯುವ ಗ್ರಾನೈಟ್ ಕಲ್ಲುಗಳನ್ನೇ ಬಳಸಲಾಗಿದೆ. ಹೀಗೆಯೇ ಬಳಸಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಹೇಳಿದ್ದೆ, ಅದರಂತೆ ಮೆಟ್ರೋ ಕಟ್ಟಡಗಳಲ್ಲಿ ನಮ್ಮ ರಾಜ್ಯದ ಕಲ್ಲುಗಳೇ ಮಿಂಚುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬಹಿರಂಗಪಡಿಸಿದರು.

ನೂತನವಾಗಿ ಉದ್ಘಾಟನೆಗೊಂಡಿರುವ ಪಿಂಕ್ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ಎಸ್.ಜಿ.ಪಾಳ್ಯದವರೆಗೆ ಪ್ರಯಾಣಿಸುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೆಟ್ರೋದಲ್ಲಿ ನಮ್ಮ ಕರ್ನಾಟಕದ ಗ್ರಾನೈಟ್ ಬಳಸಬೇಕು, ಹೊರಗಿನ ಕಲ್ಲುಗಳನ್ನು ಹಾಕಿ ಕೈಗಾರಿಕೆಯನ್ನು ಹಾಳು ಮಾಡಬೇಡಿ ಎಂದು ಹೇಳಿದ್ದೆ ಅದರಂತೆ ಹಾಕಿದ್ದಾರೆ, ನಿರ್ಮಾಣ ಅದ್ಭುತವಾಗಿ ಮೂಡಿಬಂದಿದೆ.

ರಾಜ್ಯದಲ್ಲಿ ಉತ್ತಮವಾದ ಗ್ರಾನೈಟ್ ಕಲ್ಲುಗಳಿವೆ. ಅವುಗಳಲ್ಲಿ ಚಾಮರಾಜನಗರ, ತುಮಕೂರು, ಶಿರಾ, ಬಾದಾಮಿ, ಇಳಕಲ್, ಉತ್ತರ ಕರ್ನಾಟಕ, ಕನಕಪುರ, ಮಾಗಡಿಯ ಗ್ರಾನೈಟ್ ಬಳಸಿದ್ದಾರೆ ಎಂದರು. ಹೊರ ರಾಜ್ಯದ ಗ್ರಾನೈಟ್ ಕಲ್ಲಿಗೂ ರಾಜ್ಯದ ಗ್ರಾನೈಟ್ ಕಲ್ಲಿಗೂ ಯಾವುದೇ ವ್ಯತ್ಯಾಸ ಇಲ್ಲ, ಸ್ಥಳೀಯವಾಗಿ ದೊರೆಯುವ ಕಲ್ಲುಗಳ ಕಟಿಂಗ್ ಚನ್ನಾಗಿರುತ್ತದೆ. ಅದಕ್ಕೆ ಹೊರಗಡೆಯಿಂದ ತಂದು ಹಾಕುವುದರ ಬದಲು ಸ್ಥಳೀಯವಾಗಿ ಬಳಸಲು ತಿಳಿಸಿದ್ದೆ ಎಂದರು.

ನಮ್ಮಲ್ಲೂ ತುಮಕೂರು, ಬೆಂಗಳೂರು ಬ್ಲೂ ಕಲ್ಲು ಇದೆ, ಮಲ್ಟಿ ಕಲರ್, ಕೊಳ್ಳೇಗಾಲ ಬ್ಲಾಕ್ , ಇಳಕಲ್ ರೆಡ್, ಬಾಗಲಕೋಟೆ, ಹುನಗುಂದ ಕಲ್ಲು ಇವೆಲ್ಲವನ್ನೂ ಉಪಯೋಗಿಸಿದ್ದಾರೆ ಎಂದರು.

ಮೋದಿ ಅವರೊಂದಿಗೆ ಸಿಎಂ ಒಡನಾಟ ಬಗ್ಗೆ ಕೇಳಿದಾಗ, ಎಲ್ಲರೂ ದೇಶದ ಹಿತಕ್ಕಾಗಿ ಒಟ್ಟಿಗೆ ಕೆಲಸ ಮಾಡಬೇಕು. ಚುನಾವಣೆ ಸಮಯದಲ್ಲಿ ರಾಜಕಾರಣ ಮಾಡೋಣ. ಅಭಿವೃದ್ಧಿ ಸಮಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ಅವರು (ಪ್ರಧಾನಿ ಮೋದಿ) ದೇಶವನ್ನು ಅಭಿವೃದ್ಧಿ ಮಾಡಬೇಕು ಎನ್ನಾತ್ತಾರಲ್ಲ, ಕರ್ನಾಟಕವಿಲ್ಲದೆ ಅಭಿವೃದ್ಧಿ ಆಗಲು ಹೇಗೆ ಸಾಧ್ಯ, ಕರ್ನಾಟಕ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದೆ. ಎರಡನೇ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯ, 1.5 ಲಕ್ಷ ಎಂಜಿನಿಯರ್‌ಗಳನ್ನು ತಯಾರು ಮಾಡುತ್ತಿದ್ದೇವೆ, 13,900 ವೈದ್ಯರನ್ನು ತಯಾರು ಮಾಡುತ್ತಿದ್ದೇವೆ, ನರ್ಸಿಂಗ್ ಸಿಬ್ಬಂದಿ ತಯಾರು ಮಾಡುತ್ತಿದ್ದೇವೆ. ನಮ್ಮ ಕರ್ನಾಟಕ ಬೆಳೆದರೆ ಮಾತ್ರ ಭಾರತ ಬೆಳೆದಂತೆ ಅದಕ್ಕಾಗಿಯೇ ಮೋದಿ ನನ್ನ ಜೊತೆ ಬಹಳ ಆತ್ಮೀಯತೆ, ಅನ್ಯೋನ್ಯತೆಯಿಂದ ಇದ್ದಾರೆ ಎಂದರು.

ಹೆಲಿಕಾಪ್ಟರ್‌ನಲ್ಲಿ ಮೋದಿ ಅವರ ಜೊತೆಗೆ ಮೈಸೂರಿನವರೆಗೂ ಹೋದಾಗ ಏನೆಲ್ಲಾ ಚರ್ಚೆ ಮಾಡಿದಿರಿ ಎಂಬ ಪ್ರಶ್ನೆಗೆ ಅದೆಲ್ಲಾ ಹೇಳಲು ಆಗುವುದಿಲ್ಲ. ಬಿಜೆಪಿ ನಾಯಕರಿಗೂ ಸಿಗದ ಅವಕಾಶ ಸಿಗುತ್ತೆ ಅಂದರೆ ಅದನ್ನೆಲ್ಲಾ ಮಾತನಾಡಲು ಹೋಗುವುದಿಲ್ಲ. ಅದೆಲ್ಲಾ ಮಾನವೀಯ ಸಂಬಂಧ, ಗೌರವ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ.ಜಾಫರ್, ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಅಲೋಕ್ ಸಹಾಯ್, ನಿರ್ದೇಶಕ (ಯೋಜನೆ ಮತ್ತು ನಿಯೋಜನೆ) ಸುಬ್ರಮಣ್ಯ ಗುಡ್ಗೆ ಉಪಸ್ಥಿತರಿದ್ದರು.

ಪ್ರಯಾಣಿಕರಿಂದ ಸಲಹೆ ಸ್ವೀಕಾರ:

ಮೆಟ್ರೋದ ಪಿಂಕ್ ಲೈನ್ ಶನಿವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಮೊದಲ ದಿನ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಕೃಷ್ಣಬೈರೇಗೌಡ ಪ್ರಯಾಣಿಸಿ ಪ್ರಯಾಣಿಕರಿಂದ ಸಲಹೆ, ಅಭಿಪ್ರಾಯ ಪಡೆದರು. ಇದಲ್ಲದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಶುಭಾಶಯ ಕೋರಿದ್ದಲ್ಲದೆ, ಮೆಟ್ರೋ ಕುರಿತು ಸಲಹೆ ಪಡೆದರು.

ಕೆಂಗೇರಿಯಿಂದ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಗೆ ತೆರಳುವ ಸಮಯದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿರುವ ಪಿಂಕ್ ಮಾರ್ಗದಲ್ಲೂ ಪ್ರಯಾಣಿಸಿದರು. ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿ, ಎಸ್.ಜಿ.ಪಾಳ್ಯ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸಿದರು.

ಈ ನಡುವೆ ಪ್ರಯಾಣಿಕರು, ಮಾಧ್ಯಮದವರೊಂದಿಗೆ ಸಂವಾದ ನಡೆಸಿದ್ದಲ್ಲದೆ, ಮಕ್ಕಳ ದಿನಾಚರಣೆಯ ಅಂಗವಾಗಿ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಆ ಮೂಲಕ ಪುಟಾಣಿ ಪ್ರಯಾಣಿಕರಿಗೆ ಮೆಟ್ರೋ ಪ್ರಯಾಣವನ್ನು ಅವಿಸ್ಮರಣೀಯ ಅನುಭವವನ್ನಾಗಿಸಿದರು.

ರೈಲು ಚಾಲನೆ ಮಾಡುತ್ತಿದ್ದ ಮಹಿಳಾ ರೈಲು ಚಾಲಕಿಯರೊಂದಿಗೂ ಸಂವಾದ ನಡೆಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸೇವೆಯನ್ನು ಶ್ಲಾಘಿಸಿದರು. ಮೆಟ್ರೋ ಕಾರ್ಯಾಚರಣೆಯಲ್ಲಿ ಮಹಿಳೆಯರು ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯನ್ನು ಪ್ರಶಂಸಿಸಿದರು.

ಮಕ್ಕಳೇ ಮೊಬೈಲ್ ಬಳಕೆ

ಕಡಿಮೆ ಮಾಡಿ: ಸಿಎಂ ಡಿಕೆ ಮಕ್ಕಳೇ, ಫೋನ್ ಕಡಿಮೆ ಮಾಡಿ, ಓದಿ. ಬರಿ ಮಾಹಿತಿಗೋಸ್ಕರ, ಗೂಗಲ್‌ಗೋಸ್ಕರ, ಚಾಟ್‌ಜಿಪಿಟಿಗೋಸ್ಕರ, ಮಾಹಿತಿಗೆ ಮಾತ್ರ ಫೋನ್ ಉಪಯೋಗಿಸಿ. ಬೇರೆಯದನ್ನೆಲ್ಲ ಬಿಟ್ಟುಬಿಡಿ. ಶಿಕ್ಷಣ ಮುಖ್ಯ. ನಿಮಗೆ ವಯಸ್ಸು ಇದೆ, ಈ ವಯಸ್ಸಿನಲ್ಲಿ ಸಮಯ ವ್ಯರ್ಥ ಮಾಡಬೇಡಿ. ನಾವೆಲ್ಲಾ ಸಮಯ ವ್ಯರ್ಥ ಮಾಡಿಕೊಂಡಿದ್ದು ಆಯಿತು, ನಾವು ಕಷ್ಟಪಟ್ಟಿದ್ದು ಆಯಿತು. ನೀವು ದಯವಿಟ್ಟು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ ಎಂದರು.ಸರ್ಕಾರಿ ಶಾಲೆಯಲ್ಲಿ

ಓದಿದರೆ 7.5 ಮೀಸಲು

ಸಿಎಸ್‌ಆರ್ ಬಗ್ಗೆ ಮಾರ್ಗಸೂಚಿ ಕೊಡಬೇಕೆಂದು ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರಿ ಶಾಲೆ ಉಳಿವಿಗಾಗಿ ಶೇ.7.5 ಸರ್ಕಾರಿ ಶಾಲೆಯಲ್ಲಿ ಓದುವವರಿಗೆ ಮೀಸಲಾತಿ ಕೊಡಲು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಶಾಲೆ ಮುಖ್ಯ, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು, ಅದಕ್ಕಾಗಿ ಎಲ್ಲಾ ಖಾಸಗಿ ಶಾಲೆಯವರು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಬೇಕೆಂದು ತಿಳಿಸಿದ್ದೇನೆ. ಹಾಗಂತ ಅವರಿಗೆ ಕೊಟ್ಟುಬಿಡುವುದಿಲ್ಲ. ಕೇವಲ ಕಟ್ಟಡ ಕಟ್ಟುವವರೆಗೂ ಮಾತ್ರ ಸಹಾಯ ಕೇಳಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ