ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಕೊಕ್ಕಡ, ಸೌತಡ್ಕಕ್ಕೆ ಭೇಟಿ

KannadaprabhaNewsNetwork |  
Published : Apr 04, 2024, 01:06 AM IST
ವ್ಯಕ್ತವಾದ ಮತದಾನ ಬಹಿಷ್ಕಾರದ ಬೆದರಿಕೆ | Kannada Prabha

ಸಾರಾಂಶ

ಸೌತಡ್ಕ ಸಭಾಭವನದಲ್ಲಿ ತಾಲೂಕಿನ ಸ್ವೀಪ್ ಸಮಿತಿ ವತಿಯಿಂದ ಎಲ್ಲ ಶಾಲೆಗಳು, ಅಂಗನವಾಡಿ, ಗ್ರಾಮ ಪಂಚಾಯಿತಿಗಳು, ಗ್ರಂಥಾಲಯಗಳಿಗಾಗಿ ಸಿದ್ಧಪಡಿಸಿರುವ ಪೋಸ್ಟರ್‌ ಬಿಡುಗಡೆ ಮಾಡಿ ಮತದಾರರ ಸಮಸ್ಯೆಗಳನ್ನು, ಸಂದೇಹಗಳನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಭಾರತ ಚುನಾವಣಾ ಆಯೋಗದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಮಂಗಳವಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕೊಕ್ಕಡ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮತದಾರೊಂದಿಗೆ ಸಂವಾದ ನಡೆಸಿದರು.

ಸೌತಡ್ಕ ಸಭಾಭವನದಲ್ಲಿ ತಾಲೂಕಿನ ಸ್ವೀಪ್ ಸಮಿತಿ ವತಿಯಿಂದ ಎಲ್ಲ ಶಾಲೆಗಳು, ಅಂಗನವಾಡಿ, ಗ್ರಾಮ ಪಂಚಾಯಿತಿಗಳು, ಗ್ರಂಥಾಲಯಗಳಿಗಾಗಿ ಸಿದ್ಧಪಡಿಸಿರುವ ಪೋಸ್ಟರ್‌ ಬಿಡುಗಡೆ ಮಾಡಿ ಮತದಾರರ ಸಮಸ್ಯೆಗಳನ್ನು, ಸಂದೇಹಗಳನ್ನು ಆಲಿಸಿದರು.

ಈ ವೇಳೆ ಊರಿನ ಸಮಸ್ಯೆಯ ಬಗ್ಗೆ ಸಾಮಾಜಿಕ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅಧಿಕಾರಿಗಳ ಗಮನ ಸೆಳೆದರು. ಅಲ್ಲದೆ ಸಮಸ್ಯೆ ಪರಿಹಾರ ಆಗುವವರೆಗೆ ಚುನಾವಣೆ ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು. ನಮ್ಮ ಚುನಾವಣಾ ಬಹಿಷ್ಕಾರದ ನಿರ್ಧಾರವು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೇ ಹೊರತು ಜನಪ್ರತಿನಿಧಿಗಳ ವಿರುದ್ಧ ಅಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿಗಳು, ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಜೊತೆಗೆ ಸಮಸ್ಯೆ ಬಗೆಹರಿಯುವ ತನಕ ಶ್ರೀಧರ ಗೌಡರ ಜೊತೆ ಸಂಪರ್ಕದಲ್ಲಿರುವಂತೆ ತಿಳಿಸಿದರು. ಮತದಾನ ಬಹಿಷ್ಕಾರಿಸುವುದರಿಂದ ಯಾವ ಫಲವೂ ಸಿಗುವುದಿಲ್ಲ ಬದಲಾಗಿ ಮತದಾನದ ಹಕ್ಕು ಚಲಾಯಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತದಾರರು ಪ್ರಯತ್ನಿಸಬೇಕೆಂದು ಮನವೊಲಿಸಿದರು. ವಿಶೇಷವಾಗಿ ಇವಿಎಂ ಮಿಷನ್‌ನ ಸದೃಢತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಾಧಿಕಾರಿ ಮತ್ತು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ವೈ. ಜಯಣ್ಣ, ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್‌ ಪ್ರಮೀಳಾ ರಾವ್, ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಮಾಸ್ಟರ್ ಟ್ರೈನರ್ ಯೋಗೇಶ ಎಚ್‌.ಆರ್‌., ತಾ.ಪಂ. ಅಧೀಕ್ಷಕ ಡಿ. ಪ್ರಶಾಂತ್, ಕೊಕ್ಕಡ ಗ್ರಾಮ ಪಂಚಾಯಿತಿ ಪಿಡಿಒ ದೀಪಕ್ ಕುಮಾರ್, ಟಿಎಲ್‌ಎಂಟಿ ರವಿಕುಮಾರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಗಮನ ಸೆಳೆದ ಅಂಶಗಳು: ಸುಮಾರು 400 ಜನ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಮಾಸಾಶನ ಸಿಗುತ್ತಿಲ್ಲ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಯುಡಿಐಡಿ ಕಾರ್ಡ್ ಸಿಕ್ಕಿಲ್ಲ. ಇದರಿಂದ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ರೀತಿಯ ಅಕ್ರಮ ಸಕ್ರಮ ಹಕ್ಕು ಪತ್ರಗಳನ್ನು ವಿತರಿಸಿಲ್ಲ. ನೂಜೆ ನಿವಾಸಿ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆಯಾದ ಸಂದರ್ಭ ಅವರಿಗೆ ಬಂದೂಕನ್ನು ಮನೆಯಲ್ಲಿರಿಸಿಕೊಳ್ಳುವುದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ ಈ ಬಾರಿ ವಿನಾಯತಿ ನೀಡದೇ ಇರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕೊಕ್ಕಡ, ಪಟ್ರಮೆ ಭಾಗಗಳಲ್ಲಿ ಬಹುತೇಕ ಕೃಷಿಕರೇ ಇರುವ ಕಾರಣ, ಕ್ರಿಮಿನಲ್ ಹಿನ್ನೆಲೆ ಇಲ್ಲದೆ ಇರುವ ಕೃಷಿಕರಿಗೆ ಕೋವಿ ಠೇವಣಿಯಲ್ಲಿ ವಿನಾಯಿತಿ ನೀಡಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ