- ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಿತ್ತನೆ ಬೀಜಗಳ ಬೆಲೆ ದುಪ್ಪಟ್ಟಾಗಿದ್ದು, ಇದರ ವಿರುದ್ಧ ರಾಜ್ಯದ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಸರ್ಕಾರಗಳಿಗೆ ಎಚ್ಚರಿಸಿದರು.ನಗರದ ಎಪಿಎಂಸಿ ಆವರಣದ ರೈತ ಸಭಾಂಗಣದಲ್ಲಿ ಮಂಗಳವಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಏಕಾಏಕಿ ಬಿತ್ತನೆ ಬೀಜಗಳ ಬೆಲೆ ದುಪ್ಪಟ್ಟಾದರೆ ರೈತರು ಕೃಷಿಯಿಂದಲೇ ವಿಮುಖ ಆಗಬೇಕಾಗುತ್ತದೆ ಎಂದರು.
ಸರ್ಕಾರದ ರೈತವಿರೋಧಿ ನಡೆದ ಇಡೀ ಅನ್ನದಾತ ರೈತರ ಸಮುದಾಯದಲ್ಲಿ ತೀವ್ರ ಅಸಮಾಧಾನವಿದೆ. ರಾಜ್ಯದ 70 ಲಕ್ಷ ರೈತರ ಪೈಕಿ ಕೇವಲ 27 ಲಕ್ಷ ರೈತರಿಗೆ ಮಾತ್ರ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಉಳಿದ 33 ಲಕ್ಷ ರೈತರಿಗೆ ಇನ್ನೂ ಬೆಳೆ ಹಾನಿ ಪರಿಹಾರ ಮರೀಚಿಕೆಯಾಗಿದೆ. ಕೆಲವರಿಗೆ ಕೇವಲ ₹500 ರಿಂದ ₹1500 ವರೆಗೆ ಪರಿಹಾರ ನೀಡಲಾಗಿದೆ. ಸರ್ಕಾರವೇನು ರೈತರಿಗೆ ಭಿಕ್ಷೆ ನೀಡುತ್ತಿದೆಯೇ ಎಂದು ಹರಿಹಾಯ್ದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಮಾತನಾಡಿ, ಬೆಳೆ ಹಾನಿ ಪರಿಹಾರ ನೀಡುವಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೊಳವೆ ಬಾವಿ ಆಧಾರಿತ, ಭದ್ರಾ ಕಾಲುವೆ ನೀರು ಆಧರಿಸಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಎಕರೆ ಬೆಳೆ ನಷ್ಟವಾಗಿದೆ. ಅಡಕೆ, ಕಬ್ಬು, ಬಾಳೆ, ಮಾವು, ಎಲೆಬಳ್ಳಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳು, ತೋಟದ ಬೆಳೆಗಳು ನಾಶವಾಗಿವೆ. ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಇದೇ ವೇಳೆ ನ್ಯಾಮತಿ ತಾಲೂಕು ಮಾಚೇನಹಳ್ಳಿ ಗ್ರಾಮದ ಕರಿಬಸಪ್ಪ ಗೌಡರ್ ಅವರನ್ನು ರಾಜ್ಯ ಹಸಿರು ಸೇನೆ ಅಧ್ಯಕ್ಷರಾಗಿ ನೇಮಿಸಲಾಯಿತು.
ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ರಾಜ್ಯದ 10 ಜಿಲ್ಲೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.