ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರೆತೆ ಇದ್ದು, ಈ ಬಗ್ಗೆ ಕ್ರಮ ಕೈಗೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು. ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರು ಮತ್ತು ಗರ್ಭಿಣಿಯರೊಂದಿಗೆ ಮಾತನಾಡಿ, ಆಸ್ಪತ್ರೆ ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆ ಗಳಿದ್ದರೂ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ ಅವರು, ರೋಗಿಗಳನ್ನು ಪ್ರೀತಿ ಮತ್ತು ಮಮತೆಯಿಂದ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ನನಗೆ ಈಗ ಜನಿಸಿರುವ ಮಗುವು ಸೇರಿ ಮೂರು ಮಕ್ಕಳು ಹೆಣ್ಣು ಎಂದು ಕಣ್ಣೀರು ಹಾಕಿದಾಗ, ಆ ತಾಯಿಯನ್ನು ಸಂತೈಸಿ ಯಾವುದೇ ಕಾರಣಕ್ಕೂ ನೀನು ಧೃತಿಗೆಡದೆ ಹೆಣ್ಣು ಮಕ್ಕಳನ್ನೇ ಚೆನ್ನಾಗಿ ಓದಿಸಿ ಶಿಕ್ಷಿತರನ್ನಾಗಿ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಡಿ ಎಂದು ಧೈರ್ಯ ದ ಮಾತುಗಳನ್ನಾಡಿದರು. ಮಾತನಾಡುವ ಸಮಯದಲ್ಲಿ ಆಕೆಗೆ ಮೊಬೈಲ್ ಸಂಖ್ಯೆ ನೀಡಿದ ಆಯೋಗದ ಅಧ್ಯಕ್ಷರು ನಿನಗೆ ಯಾವುದೇ ಸಮಸ್ಯೆ ಇದ್ದರು ನನಗೆ ಕರೆ ಮಾಡಿ ಎಂದು ಹೇಳಿ ನಿನ್ನ ಮಕ್ಕಳ ಓದು ಮತ್ತು ಭವಿಷ್ಯಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಕೆ.ಆರ್.ನಗರ ಸೇರಿದಂತೆ ಸುತ್ತಮುತ್ತಲಿನ ನಾಲ್ಕಾರು ತಾಲೂಕಿನ ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ ಎಂದರು. ನಂತರ ಅವರು ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಸದಸ್ಯರಾದ ಪ್ರಕಾಶ್, ನಟರಾಜು, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಲೋಕೇಶ್, ಎಚ್.ಎಚ್. ನಾಗೇಂದ್ರ, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಣಿ, ಕೆ.ಆರ್. ನಗರ ಘಟಕದ ಅಧ್ಯಕ್ಷೆ ಲತಾರವಿ, ಡಾ. ದಿವ್ಯತ, ಡಾ. ಭವಾನಿ, ಡಾ. ದರ್ಶನ್, ಡಾ. ಚಂದ್ರಶೇಖರ್, ಡಾ. ದೀಪ್ತಿ, ಡಾ. ವೇದಾವತಿ, ಡಾ. ಪ್ರೇಮಲತಾ ಇದ್ದರು.