ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನ ದೊಡ್ಡಹಟ್ಟಿ ಹಾಗೂ ಕಕ್ಕೇರು ಗ್ರಾಮಗಳಲ್ಲಿ ಒಟ್ಟು 2 ಕೋಟಿ 5 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಳೆ ನೀರು ಹರಿದು ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ನೀರಿನ ಸಂಗ್ರಹಣೆಗೆ ಅನುಕೂಲವಾಗುವ ಬೃಹತ್ ಹಳ್ಳಗಳು ಹಾಗೂ ನೀರು ತಡೆಗಟ್ಟುವ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತಿದೆ. ನಮ್ಮ ನೀರು ನಮ್ಮ ನೆಲದಲ್ಲಿಯೇ ಉಳಿಯಬೇಕು ಎಂಬುದು ನಮ್ಮ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಚೆಕ್‌ಡ್ಯಾಂಗಳ ನಿರ್ಮಾಣದಿಂದ ಸಾಕಷ್ಟು ಅನುಕೂಲವಾಗಲಿದೆ. ರೈತರ ಜಮೀನು, ತೋಟ ಹಾಗೂ ಕೃಷಿ ಪ್ರದೇಶಗಳ ಸಮೀಪ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಸುಧಾರಿಸಲು ಸಹಕಾರಿಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಬೇಸಿಗೆ ಸಂದರ್ಭದಲ್ಲಿಯೂ ನೀರಿನ ಸಮಸ್ಯೆ ನಿವಾರಣೆಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.ಕಕ್ಕೇರು ಗ್ರಾಮದ ಯುವ ಮುಖಂಡ ಮಹಾಂತೇಶ್.ಟಿ ಮಾತನಾಡಿ, ಅನ್ನೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬಹುತೇಕ ಗ್ರಾಮಗಳು ಗುಡ್ಡ ಪ್ರದೇಶಗಳಿಂದ ಕೂಡಿದ್ದು ಮಳೆ ನೀರು ಹಳ್ಳಗಳ ಮೂಲಕ ಹರಿದು ಬೇರೆ ಕೆರೆಗೆ ಸೇರುತ್ತವೆ. ಚೆಕ್ ಡ್ಯಾಂ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಶಾಸಕರು ಸಂಬಂಧಪಟ್ಟ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬೃಹತ್ ಮಟ್ಟದ ಚೆಕ್ ಡ್ಯಾಂ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು , ಅದರ ಪ್ರತಿಫಲವಾಗಿ ಗ್ರಾಮದ ಹೊರ ವಲಯದ ಹಳ್ಳಗಳಿಗೆ ಚಿಕ್ ಡ್ಯಾಂ ಭೂಮಿ ಪೂಜೆ ನೆರವೇರಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.