ಕನ್ನಡಪ್ರಭ ವಾರ್ತೆ ನಾಗಮಂಗಲ
ಎಂಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚ್ಚಿನ್ ಅವಿರೋಧ ಆಯ್ಕೆಯಾಗಿರುವುದನ್ನು ಸಹಿಸದ ಮಾಜಿ ಶಾಸಕ ಸುರೇಶ್‌ಗೌಡ ಸಚಿವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಸಹಕಾರ ಸಂಘಗಳಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿರುವುದರಿಂದ ಎಂಡಿಸಿಸಿ ಬ್ಯಾಂಕ್‌ಗೆ ೮ ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಪರಿಜ್ಞಾನವಿಲ್ಲದ ಮಾಜಿ ಶಾಸಕ ಸುರೇಶ್‌ಗೌಡ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಸಚಿವ ಚಲುವರಾಯಸ್ವಾಮಿ ವಾಮಮಾರ್ಗ ನಡೆಸಿದ್ದಾರೆಂದು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ತಾಲೂಕಿನಲ್ಲಿ 14 ಸಹಕಾರ ಸಂಘಗಳಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯಿದ್ದರೆ ಕೇವಲ 1 ಸಹಕಾರ ಸಂಘ ಮಾತ್ರ ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿಯಿದೆ. ಜೆಡಿಎಸ್ ಬೆಂಬಲಿತ ಸಹಕಾರ ಸಂಘದಿಂದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಆಕಾಂಕ್ಷಿತ ಅಭ್ಯರ್ಥಿಯೂ ಕೂಡ ಸಚಿವರ ಪುತ್ರ ಸಚ್ಚಿನ್ ಚುನಾವಣೆಗೆ ಸ್ಪರ್ಧಿಸುವುದಾದರೆ ಅವರ ನಾಮಪತ್ರಕ್ಕೆ ನಾನೇ ಸೂಚಕನಾಗಿ ಸಹಿ ಹಾಕುತ್ತೇನೆಂದು ಹೇಳಿದ್ದರು ಎಂದು ಹೇಳಿದರು.ಕಳೆದ ಸಹಕಾರ ಸಂಘದ ಚುನಾವಣೆಯಲ್ಲಿ ಸೋಲನುಭವಿಸಿದ್ದ ತಾಲೂಕಿನ ದೇವೇಗೌಡರನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲಿಸಲಾಗಿತ್ತು. ಆದರೆ, ಶ್ರೀರಂಗಪಟ್ಟಣದ ಗುತ್ತಿಗೆದಾರ ಸುರೇಶ್‌ಗೌಡರು ರಾಜೀಸಂಧಾನ ಮಾಡಿಸಿ ದೇವೇಗೌಡರ ನಾಮಪತ್ರ ಹಿಂಪಡೆಸಿ ನೇರವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸಹಾಯ ಮಾಡಿರುವುದು ಸತ್ಯ. ಈ ರಾಜೀ ಸಂಧಾನಕ್ಕೆ ತಾಲೂಕು ಜೆಡಿಎಸ್ ಅಧ್ಯಕ್ಷರೂ ಕೂಡ ಹೋಗಿದ್ದಾರೆ. ಅವರು ಕಾಂಗ್ರೆಸ್‌ಗೆ ಸಹಾಯ ಮಾಡಿಲ್ಲ ಎಂದರೆ ಯಾವ ದೇವಸ್ಥಾನಕ್ಕಾದರೂ ಆಣೆ ಪ್ರಮಾಣಕ್ಕೆ ತಾವು ಸಿದ್ದ ಎಂದು ಸವಾಲು ಹಾಕಿದರು.
ಸಚಿವರ ಬಗ್ಗೆ ಮಾಜಿ ಶಾಸಕ ಸುರೇಶ್‌ಗೌಡ ಕೀಳುಮಟ್ಟದ ಹೇಳಿಕೆ ನೀಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇನ್ನು ಮುಂದಾದರೂ ಇಂತಹ ಸಲ್ಲದ ಮಾತುಗಳನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆಂದು ಎಚ್ಚರಿಕೆ ನೀಡಿದರು.ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ವಸಂತಮಣಿ ಮಾತನಾಡಿ, ವಾಮಮಾರ್ಗದ ಕಲೆಯನ್ನು ರೂಢಿಸಿಕೊಂಡಿರುವುದು ಮಾಜಿ ಶಾಸಕ ಸುರೇಶ್‌ಗೌಡರೇ ಹೊರತು ಸಚಿವ ಚಲುವರಾಯಸ್ವಾಮಿ ಅಲ್ಲ ಎಂದು ತಿರುಗೇಟು ನೀಡಿದರು.
ಸುದ್ಧಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ಕಾರ್ಯದರ್ಶಿ ಟಿ.ಚನ್ನಾಪುರ ವಿಜಯಕುಮಾರ್ ಇದ್ದರು.