ಗದಗ: ಶ್ರೀರಾಮ ಸೇನಾ ವತಿಯಿಂದ ಕಳೆದ ೧೯ ವರ್ಷದಿಂದ ಚಿಕ್ಕಮಗಳೂರಿನ ಗುರು ದತ್ತಾತ್ರೇಯರ ಪವಿತ್ರ ಕ್ಷೇತ್ರ ದತ್ತ ಪೀಠ ಇಸ್ಲಾಮಿಕ್ ಆಕ್ರಮಣದ ಮುಕ್ತಿಗಾಗಿ ಪ್ರತಿವರ್ಷದಂತೆ ಈ ವರ್ಷವೂ ಅ. ೩೦ರಿಂದ ನವೆಂಬರ್ ೫ರ ವರೆಗೆ ರಾಜ್ಯಾದ್ಯಂತ ದತ್ತ ಮಾಲಾ ಅಭಿಯಾನ ನಡೆಸುತ್ತಿದೆ. ಈ ಒಂದು ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದಲೂ ನೂರಾರು ಸಂಖ್ಯೆಯಲ್ಲಿ ದತ್ತ ಭಕ್ತರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಶ್ರೀರಾಮ ಸೇನಾ ಧಾರವಾಡ ವಿಭಾಗದ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಅಭಿಯಾದನ ಅಂಗವಾಗಿ ಅ.೩೦ರಂದು ದತ್ತಮಾಲೆ ಧಾರಣೆ. ನವೆಂಬರ್ ೨ರಂದು ದತ್ತ ದೀಪೋತ್ಸವ, ನ. ೪ರಂದು ಪಡಿ ಸಂಗ್ರಹ, ನ. ೫ರಂದು ಬೆಳಗ್ಗೆ ೭ಕ್ಕೆ ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ, ಧರ್ಮ ಸಭೆ. ದತ್ತ ಪೀಠದಲ್ಲಿ ಬೆಳಗ್ಗೆ ೧೧ಕ್ಕೆ ಪಾದುಕೆ ದರ್ಶನ, ಹೋಮ ಹವನ ಮಹಾ ಪ್ರಸಾದ ನಡೆಯುವುದು ಎಂದರು.ಗುರು ದತ್ತಾತ್ರೇಯರು ಅವರ ತಂದೆ ಅತ್ರಿ ಮಹರ್ಷಿ, ತಾಯಿ ಅನಸೂಯಾ ತಪೋಗೈದ ಪುಣ್ಯಭೂಮಿ ಈ ದತ್ತಪೀಠ. ದತ್ತಾತ್ರೇಯರ ದುರ್ಲಭ ಪಾದುಕೆ ದರ್ಶನದಿಂದ ಸಾವಿರಾರು ಭಕ್ತರು ತಮ್ಮ ಮನೋ ಇಷ್ಟಗಳನ್ನು ಪಡೆದ ಉದಾಹರಣೆಗಳಿವೆ. ವಿಶೇಷವಾಗಿ ಮಕ್ಕಳಿಲ್ಲದ ದಂಪತಿಗಳಿಗೆ ಅನಸೂಯಾ ಭಾವಿಯ ಪವಿತ್ರ ಮೃತ್ತಿಕೆ (ಮಣ್ಣು) ಸಂತತಿ ಕರುಣಿಸಿದ ಸಾಕಷ್ಟು ನಿದರ್ಶನಗಳಿವೆ. ಹಲವು ರೋಗಗಳಿಗೆ ಗುಹೆಯಲ್ಲಿ ಹರಿಯುವ ತೀರ್ಥ ರಾಮಬಾಣ ಅನ್ನುವುದು ಭಕ್ತರ ದೃಢ ನಂಬಿಕೆ. ಇಂಥಹ ಪೀಠಕ್ಕೆ ಬಾಳೆಹೊನ್ನೂರು, ಮೈಸೂರು, ಕೆಳದಿ ಚನ್ನಮ್ಮ ಮುಂತಾದವರು ಆರಾಧಿಸಿ, ಪೂಜಿಸಿ ದಾನ, ದತ್ತಿ, ಇನಾಮ್ ನೀಡಿದ್ದಾರೆ. ಅದಕ್ಕಾಗಿಯೇ ಇಂದೂ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಇನಾಮ್ ದತ್ತಾತ್ರೇಯ ಪೀಠ ಅಂತಾನೇ ಉಲ್ಲೇಖವಿದೆ. ಆದರೂ ಇಂಥಹ ಪವಿತ್ರ ಸ್ಥಳವನ್ನು ಕೆಲವು ಇಸ್ಲಾಮಿಕ್ ಮತಾಂಧರು ಅಕ್ರಮ ಮಾಡಿಕೊಂಡು ಅದನ್ನು ಬಾಬಾಬುಡನ್ ದರ್ಗಾ ಎಂದು ಸುಳ್ಳು ಹೇಳಿ ಹಿಂದೂ ಧಾರ್ಮಿಕ ಭಾವನೆಗಳಿಗೆ, ಹಿಂದೂ ಧಾರ್ಮಿಕ ಹಕ್ಕಿಗೆ ಕಂಟಕರಾಗಿದ್ದಾರೆ. ಇದರ ವಿರುದ್ಧ ಸತತ ೧೯ ವರ್ಷ ಕಾನೂನು ಹಾಗೂ ಜನಾಂದೋಲನ ಮೂಲಕ ತಕ್ಕ ಉತ್ತರ ಕೊಟ್ಟು ಹಿಂದುಗಳಿಗೆ ಪೀಠ ಉಳಿಯಲು ಹಗಲಿರುಳು ಹೋರಾಟ ನಡೆಯುತ್ತಿದೆ ಎಂದರು.ಈ ೧೯ ವರ್ಷದ ಹೋರಾಟದಿಂದಾಗಿ ಎಲ್ಲ ನ್ಯಾಯಾಲಯದಲ್ಲೂ ಅದು ದತ್ತ ಪೀಠ ಅನ್ನುವುದು ಸಾಬೀತಾಗಿದೆ.
ಅಲ್ಲಿದ್ದ ಗೋರಿಗಳಿಗೆ ಹಾಕಿದ ಹಸಿರು ಬಟ್ಟೆ, ಹಸಿರು ಧ್ವಜ ತೆರವಾಗಿದೆ. ಗೋಹತ್ಯೆ, ಗೊಮಾಂಸ ಭಕ್ಷಣೆ ನಿರ್ಬಂಧವಾಗಿದೆ.ನಮಾಜ್, ಮೈಕ್ ಬಂದ್ ಆಗಿದೆ. ಹಿಂದೂ ಅರ್ಚಕರ ನೇಮಕವಾಗಿ ಪೂಜೆ ಪುನಸ್ಕಾರ ಧಾರ್ಮಿಕ ಆಚರಣೆ ಪ್ರಾರಂಭವಾಗಿದೆ.
ದತ್ತಪೀಠದಲ್ಲಿರುವ ಅಕ್ರಮ, ಅನಧಿಕೃತ ಗೋರಿಗಳು ಸರ್ಕಾರಿ ದಾಖಲೆಗಳ ಪ್ರಕಾರ ಅಲ್ಲಿಂದ ೧೪ ಕಿಮೀ ದೂರದಲ್ಲಿರುವ ನಾಗೇನಹಳ್ಳಿ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರವಾಗಲೇಬೇಕು. ದತ್ತಪೀಠ ಹಿಂದೂ ಪೀಠ ಅಂತ ಘೋಷಣೆ ಆಗಬೇಕು. ದತ್ತ ಪೀಠ ಮುಜರಾಯಿ ಇಲಾಖೆ ಅಧೀನದಲ್ಲಿ ಇರುವುದರಿಂದ ಅಲ್ಲಿ ನಡೆಯುವ ಉರೂಸ್ ಬಂದ್ ಆಗಲೇಬೇಕು. ಬರುವ ಭಕ್ತರಿಗಾಗಿ ನಿತ್ಯ ಪ್ರಸಾದ ವ್ಯವಸ್ಥೆ, ಯಾತ್ರಿ ನಿವಾಸ, ಉಪನಯನ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಬೇಕು. ಸಾಧು, ಸಂತರಿಗೆ ದರ್ಶನಕ್ಕೆ ಮುಕ್ತ ಅವಕಾಶ ಸಿಗಬೇಕು ಎಂದರು.ಈ ಎಲ್ಲ ಬೇಡಿಕೆ ಈಡೇರಲು ಸರ್ಕಾರಕ್ಕೆ ಆಗ್ರಹಿಸಿ ದತ್ತ ಮಾಲೆ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಇದ್ದರು.