ಸರ್ಕಾರಿ ಶಾಲೆ ಮುಚ್ಚಿದರೆ ರಾಜ್ಯವ್ಯಾಪಿ ಹೋರಾಟ

KannadaprabhaNewsNetwork |  
Published : Dec 13, 2025, 04:30 AM IST
Gandhi Bhavan  3 | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರೋಧಿಸಿ ನಡೆದ ಜನ ಸಮಾವೇಶದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಡವರು, ದಲಿತರು ಮತ್ತು ಹೆಣ್ಣುಮಕ್ಕಳ ಪಾಲಿನ ಜೀವನಾಡಿಯಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸಂಘಟನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದೆ.

ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಜನ ಸಮಾವೇಶದಲ್ಲಿ ಭಾಗವಹಿಸಿದ್ದ ಶಿಕ್ಷಣ ತಜ್ಞರು, ಕನ್ನಡ ಪರ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಚರ್ಚಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಯನ್ನು ಜನವಿರೋಧಿ ಎಂದು ಕರೆದು ಹೋರಾಟದ ಎಚ್ಚರಿಕೆ ನೀಡಿದರು.

ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಕೆಲವೇ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಹತ್ತಿರದ ಚಿಕ್ಕ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ತಂತ್ರ ನಡೆದಿದೆ. ಅದರ ಬದಲು ಅಸ್ತಿತ್ವದಲ್ಲಿರುವ ಪ್ರತಿಯೊಂದು ಸರ್ಕಾರಿ ಶಾಲೆಗೂ ಮೂಲಸೌಕರ್ಯ, ಶಿಕ್ಷಕರನ್ನು ಒದಗಿಸಬೇಕು. ಎನ್‌ಇಪಿ ಜಾರಿಯಿಂದ ಮತ್ತು ಶಿಕ್ಷಣದಲ್ಲಿ ವಿದೇಶಿ ಸಾಲ, ಹೂಡಿಕೆ ಮಾಡುವುದರಿಂದ ಶಿಕ್ಷಣ ಮಾರಾಟದ ಸರಕಾಗುತ್ತದೆ. ಹೀಗಾಗಿ, ಈ ಯೋಜನೆಯನ್ನು ಹಿಂಪಡೆಯಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.

ಬೋಧನಾ ಮಾಧ್ಯಮವು ಕಡ್ಡಾಯವಾಗಿ ಮಾತೃಭಾಷೆ (ಕನ್ನಡ) ಆಗಿರಬೇಕು. ಆದರೆ, ಇಂಗ್ಲಿಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಸಮರ್ಪಕವಾಗಿ ಕಲಿಸಬೇಕು. ಪೋಷಕರು ಇಂಗ್ಲಿಷ್‌ಗಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದನ್ನು ತಡೆಯಲು, ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಇಂಗ್ಲಿಷ್ ಕಲಿಕೆ ಸಾಧ್ಯವಾಗಬೇಕು ಎಂದು ಸಮಾವೇಶದಲ್ಲಿ ಕೋರಲಾಯಿತು.

ಸಂವಿಧಾನದ ಆಶಯದಂತೆ ಸರ್ಕಾರಿ ಶಾಲೆಗಳಿಂದ ಮಾತ್ರ ಎಲ್ಲರಿಗೂ ಸಮಾನ ಶಿಕ್ಷಣ ಸಾಧ್ಯ. ಈ ಶಾಲೆಗಳನ್ನು ಮುಚ್ಚಿದರೆ ಸಮಾಜದ ಕೆಳಸ್ತರದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಾಜ್ಯಮಟ್ಟದ ಹೋರಾಟ ರೂಪಿಸಲು ನಿರ್ಣಯಿಸಲಾಯಿತು.

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಸಿಎಂ

ಸಮಾವೇಶದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಕೆಪಿಎಸ್ ಹೆಸರಿನಲ್ಲಿ ಸುಸಜ್ಜಿತ ಶಾಲೆ ತೋರಿಸಿ, ಸುತ್ತಮುತ್ತಲ ಹತ್ತಾರು ಶಾಲೆಗಳನ್ನು ಮುಚ್ಚುವ ತಂತ್ರವಿದೆ. ಕೆಪಿಎಸ್ ಶಾಲೆಗಳ ಸ್ಥಾಪನೆಯು ಸಮಾನ, ಕಡ್ಡಾಯ ಮತ್ತು ಉಚಿತ ಶಿಕ್ಷಣ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಈ ಯೋಜನೆಯಿಂದ ಶೈಕ್ಷಣಿಕ ವಲಯಕ್ಕೆ ಆಗುವ ಸಮಸ್ಯೆಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸದನದಲ್ಲಿ ಹೇಳಿದ್ದಾರೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗಾಗಿ 7 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶಾಲೆಗಳ ಮ್ಯಾಪಿಂಗ್ ನಡೆದಿದೆ. ಸರ್ಕಾರಿ ಶಾಲೆಗಳ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ.ಎ.ಮುರಿಗೆಪ್ಪ ಸೇರಿ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ