ಗದಗ: ನೂತನ ಪಿಂಚಣಿ ಯೋಜನೆಯಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಪಿಂಚಣಿ ಯೋಜನೆ ಕಡಿತಗೊಳಿಸಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಹಕ್ಕು ಪಡೆಯಲು ರಾಜ್ಯಾದ್ಯಂತ ನೌಕರರು ಹೋರಾಡಬೇಕಿದೆ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಅಧ್ಯಕ್ಷ ಜಿ. ಹನುಮಂತಪ್ಪ ತಿಳಿಸಿದರು.
ನಗರದ ಮುನ್ಸಿಪಲ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ರಾಜ್ಯ ಪಿಂಚಣಿ ವಂಚಿತ ಹಾಗೂ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅನುದಾನಿತ ನೌಕರರ ಹಕ್ಕುಗಳ ಹೋರಾಟ ಜಾಗೃತಿ ಹಾಗೂ ಸಂಘ ಬಲವರ್ಧನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನೂ ಅನುದಾನಿತ ಶಾಲಾ- ಕಾಲೇಜುಗಳ ನೌಕರರಿಗೂ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸಂಘಟನೆಯನ್ನು ಬಲವರ್ಧನೆಗೊಳಿಸಿ ಸರ್ಕಾರದ ಮೇಲೆ ಒತ್ತಡ ತರಲು ಸಂಘಟನೆ ಅವಶ್ಯ ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಚ್. ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 25- 30 ವರ್ಷ ಸೇವೆ ಮಾಡಿದ ನೌಕರರಿಗೆ ನಿವೃತ್ತಿ ನಂತರ ಬಿಡಿಗಾಸು ಕೊಡದೆ ಬರಿಗೈಯಲ್ಲಿ ಕಳುಹಿಸಿದರೆ ಅವರ ಬದುಕು ಸಂಸಾರದ ಗತಿ ಏನು? ವಯೋಸಹಜ ಕಾಯಿಲೆಗಳ ಚಿಕಿತ್ಸೆಗೂ ಇನ್ನೊಬ್ಬರನ್ನು ಅವಲಂಬಿಸುವಂತಾಗಿದೆ. ಈ ಕುರಿತು ಸರ್ಕಾರ ಮರುಪರಿಶೀಲನೆ ಮಾಡಿ ತುರ್ತು ಅಗತ್ಯ ಕ್ರಮ ಜರುಗಿಸಿ ಅನ್ಯಾಯವನ್ನು ಸರಿಪಡಿಸಬೇಕು ಎಂದರು.ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉಮೇಶ ಹಿರೇಮಠ, ವಿ.ಎಚ್. ಕೊಳ್ಳಿ ಅವರು ಸಂಘಟನೆಯ ಬಲವರ್ಧನೆ, ಸರ್ಕಾರದ ಮಲತಾಯಿ ಧೋರಣೆ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಈರಣ್ಣ ಹಾದಿಮನಿ ಮಾತನಾಡಿ, ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನೂ ಅನುದಾನಿತ ಶಾಲಾ- ಕಾಲೇಜುಗಳ ನೌಕರರಿಗೂ ನೀಡುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.ಪ್ರಧಾನ ಕಾರ್ಯದರ್ಶಿ ರವಿ ಕೋಟಿ ಸ್ವಾಗತಿಸಿದರು. ಎಸ್.ಕೆ. ಆಡಿನ ನಿರೂಪಿಸಿ, ವಂದಿಸಿದರು. ಪ್ರಾಚಾರ್ಯ ಉಮೇಶ ಹಿರೇಮಠ, ಶಶಿಧರ ಕುರಿ, ಮೇಗಲಮನಿ, ಸಿ.ಬಿ. ಕಮ್ಮಾರ, ಪ್ರದೀಪ ನಾಯಕ, ಎಸ್.ಸಿ. ಗಿಂಡಿಮಠ, ಆರ್.ಡಿ. ಪವಾರ, ಬಿ.ಎಸ್. ಬಸನಗೌಡರ, ಐ.ಕೆ. ಕಮ್ಮಾರ, ಮಂಜುನಾಥ ತೆಗ್ಗಿಮನಿ ಎಂ.ಕೆ. ವಾಲಿಕಾರ, ಸಂಗಮೇಶ ಅಬ್ಬಿಗೇರಿ, ಎಸ್.ಎಸ್. ಪಾಟೀಲ, ಧನೇಶ ನಾಯಕ್, ಎಂ.ಡಿ. ಕೊಟಗಿ, ಎಂ.ಎಚ್. ಜೋಗಿನ, ಬಸಯ್ಯ ಸಾಲಿಮಠ, ಎ.ಬಿ. ಬೊಮ್ಮನಗೌಡ್ರು, ಎಂ.ಎಂ. ಬಿಜೂರ್, ಕೆ.ಎಫ್. ರಾಥೋಡ್, ಎಫ್.ವೈ. ಪಲ್ಲೇದ ಸೇರಿದಂತೆ ಜಿಲ್ಲೆಯ ಪಿಂಚಣಿ ವಂಚಿತ ನೌಕರರು ಭಾಗವಹಿಸಿದ್ದರು.