ಆ. 15ರಂದು ರಾಜ್ಯಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ: ಕುರುಬೂರು ಶಾಂತಕುಮಾರ

KannadaprabhaNewsNetwork |  
Published : Aug 02, 2024, 12:51 AM IST
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೈತಸೇನೆ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿದರು. | Kannada Prabha

ಸಾರಾಂಶ

ಕಳೆದ ಒಂದುವರೆ ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರ್ಕಾರ ರೈತರಿಗೆ ಬೆಳೆಹಾನಿ, ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಬೇಕು.

ಹುಬ್ಬಳ್ಳಿ:

ಮಹದಾಯಿ, ಕೃಷ್ಣಾ ನದಿ ಯೋಜನೆ ಸಮರ್ಪಕ ಜಾರಿ, ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ, ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿ ಹಾಗೂ ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಆ. 15ರಂದು ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟದ ಬೆಂಬಲಾರ್ಥವಾಗಿ ನಮ್ಮ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಅಂದು ಎಲ್ಲ ರೈತರು ಒಟ್ಟಾಗಿ ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ರ್‍ಯಾಲಿ ನಡೆಸಿ, ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸಿದರೂ, ಸಮರ್ಪಕವಾಗಿ ಬೆಳೆಹಾನಿ ಪರಿಹಾರ ನೀಡಿಲ್ಲ. ಸದ್ಯ ರಾಜ್ಯದ ರೈತರು ಮಳೆಯಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷ ಕಳೆದರೂ ಯಾವುದೇ ಬೇಡಿಕೆ ಈಡೇರಿಸಿಲ್ಲ. ಸರ್ಕಾರಕ್ಕೆ ನಿಜವಾಗಲು ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಎಂಎಸ್‌ಪಿ ಗ್ಯಾರಂಟಿ ಕಾನೂನು, ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಕಳೆದ ಒಂದುವರೆ ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರ್ಕಾರ ರೈತರಿಗೆ ಬೆಳೆಹಾನಿ, ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಬೇಕು. ಜತೆಗೆ ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ರೈತ ಪ್ರತಿನಿಧಿಗಳನ್ನು ಒಳಗೊಂಡ ಪರಿಣಿತರ ಸಮಿತಿ ರಚಿಸಿ ಕಾರ್ಯಯೋಜನೆ ರೂಪಿಸಬೇಕು ಎಂದರು.

ಕರ್ನಾಟಕ ರೈತಸೇನೆ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಮಹದಾಯಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ಸಚಿವರ ನಡೆ ಖಂಡಿಸಿ, ಮುಂಬರುವ ದಿನಗಳಲ್ಲಿ ದೆಹಲಿಗೆ ತೆರಳಿ ನೂರಾರು ರೈತ ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಖಾತೆಯ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಈ ವೇಳೆ ರಾಜ್ಯ ಹಸಿರು ಸೇನೆ ಅಧ್ಯಕ್ಷ ಕರಬಸಪ್ಪಗೌಡ, ದಯಾನಂದ ಪಾಟೀಲ, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಮಹೇಶ ಬೆಳಗಾಂವಕರ, ಮಲ್ಲಣ್ಣ ಹಲೆಕರ, ಗುರುಸಿದ್ದಪ್ಪ ಕೋಟಗಿ, ಪರಶುರಾಮ ಎತ್ತಿನಗುಡ್ಡ, ಉಳುವಪ್ಪ ಬಳಗೇರ, ಆತಹಳ್ಳಿ ದೇವರಾಜ್ ಸೇರಿದಂತೆ ಹಲವರಿದ್ದರು

ರಾಷ್ಟ್ರಪತಿ ಪುರಸ್ಕಾರಕ್ಕೆ ವಿರೋಧ

ಹರಿಯಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆಸಿ, ರೈತರ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳಿಗೆ ಅಲ್ಲಿನ ಸರ್ಕಾರ ರಾಷ್ಟ್ರಪತಿ ಪುರಸ್ಕಾರ ನೀಡಲು ಮುಂದಾಗಿದೆ. ಕೂಡಲೇ ಅದನ್ನು ಕೈ ಬಿಡಬೇಕು ಎಂದು ರೈತ ಸಂಘಟನೆಗಳು ಗುರುವಾರ ಇಲ್ಲಿನ ಪ್ರವಾಸಿ ಮಂದಿರದ ಎದುರು ಹರಿಯಾಣ ಸರ್ಕಾರದ ಆದೇಶದ ಪ್ರತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೈಗೊಂ ನಿರ್ಣಯಗಳು:ಹುಬ್ಬಳ್ಳಿಯಲ್ಲಿ ನಡೆದ ಉತ್ತರ ಕರ್ನಾಟಕ ಭಾಗದ ರೈತ ಸಂಘಟನೆಗಳ ಸಭೆಯಲ್ಲಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಪ್ರಮುಖ 4 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 29ರಂದು ನರಗುಂದದಲ್ಲಿ ಬೃಹತ್ ರೈತ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಮಹದಾಯಿ ನದಿ ನೀರಿನ ವಿವಾದ ಮತ್ತು ಕಳಸ ಬಂಡೂರಿ ಸಮಸ್ಯೆ ಬೇಗನೆ ಇತ್ಯರ್ಥಪಡಿಸಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಇರುವ ಬಚಾವತ್ ತೀರ್ಪು ಜಾರಿಯಾಗಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡುವಂತೆ ಒತ್ತಾಯಿಸುವುದು. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಆ. 29ರ ಬೃಹತ್ ಸಮಾವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ