ರೆಕಾರ್ಡ್ ರೂಂನಲ್ಲಿ ನಮ್ಮ ದಾಖಲೆ ಪಡೆಯಲು ಹಣ ನೀಡಬೇಕು: ರೈತರ ದೂರು

KannadaprabhaNewsNetwork | Published : Aug 2, 2024 12:51 AM

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಕಂದಾಯ ಇಲಾಖೆ ರೆಕಾರ್ಡ್ ರೂಂನಲ್ಲಿ ಅಗತ್ಯ ದಾಖಲೆ ಪಡೆಯಲು ರೈತರು ನಿತ್ಯ ಕಿರುಕುಳ ಎದುರಿಸುತ್ತಿದ್ದಾರೆ. ಸಿಬ್ಬಂದಿಗೆ ಕೇಳಿದಷ್ಟು ಹಣ ನೀಡಬೇಕಿದೆ ಎಂದು ತಾಲೂಕು ರೈತಸಂಘ ಆರೋಪಿಸಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ತಾಲೂಕು ಆಡಳಿತ ಸೌಧದ ಕಂದಾಯ ಇಲಾಖೆ ರೆಕಾರ್ಡ್ ರೂಂನಲ್ಲಿ ಅಗತ್ಯ ದಾಖಲೆ ಪಡೆಯಲು ರೈತರು ನಿತ್ಯ ಕಿರುಕುಳ ಎದುರಿಸುತ್ತಿದ್ದಾರೆ. ಸಿಬ್ಬಂದಿಗೆ ಕೇಳಿದಷ್ಟು ಹಣ ನೀಡಬೇಕಿದೆ ಎಂದು ತಾಲೂಕು ರೈತಸಂಘ ಆರೋಪಿಸಿತು.

ಅಧಿಕಾರಿಗಳ ನಿತ್ಯ ಕಿರುಕುಳ ಹಾಗೂ ಲಂಚದ ಬಗ್ಗೆ ಸ್ಥಳದಲ್ಲಿದ್ದ ರೈತರಿಂದ ಮಾಹಿತಿ ಪಡೆದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ದಾಖಲೆ ಕೇಂದ್ರದಲ್ಲಿ ರೈತರ ಸುಲಿಗೆ ನಿಲ್ಲಿಸುವಂತೆ ಒತ್ತಾಯಿಸಿದರು.

ದಾಖಲಾತಿ ಸಂಗ್ರಹ ಕೇಂದ್ರದಲ್ಲಿ ರೈತರು ತಮಗೆ ಬೇಕಾದ ದಾಖಲೆ ಪಡೆಯಲು ಅರ್ಜಿ ನೀಡಿ ಒಂದು ದಾಖಲಾತಿಗೆ 10 ರು. ಶುಲ್ಕ ಪಾವತಿಸಬೇಕು. ಪಾವತಿಸಿದ ಹಣಕ್ಕೆ ಸಿಬ್ಬಂದಿ ರಸೀದಿ ನೀಡಬೇಕು. ಮಾಹಿತಿ ಫಲಕ ಹಾಕಬೇಕು. ಆದರೆ, ಅಳವಡಿಸಿಲ್ಲ ಎಂದು ದೂರಿದರು.

ಪ್ರತಿಯೊಂದು ದಾಖಲೆಗೆ ರೈತರು ಸಿಬ್ಬಂದಿಗಳು ಕೇಳಿದಷ್ಟು ಹಣ ನೀಡಬೇಕು. ಹಣಕ್ಕೆ ರಸೀದಿ ಹಾಕುತ್ತಿಲ್ಲ. ಹೆಚ್ಚು ಹಣ ಕೊಟ್ಟವರಿಗೆ ತಕ್ಷಣವೇ ಅಗತ್ಯ ದಾಖಲೆ ನೀಡುತ್ತಿದ್ದಾರೆ. ಹಣ ನೀಡದ ರೈತರನ್ನು ಅನಗತ್ಯವಾಗಿ ತಿರುಗಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮ ಜಮೀನಿನ ದಾಖಲಾತಿ ಪಡೆಯಲು ರೈತರು ಕಿರುಕುಳ ಅನುಭವಿಸಬೇಕಾದ ಸ್ಥಿತಿಯಿದೆ. ರೆಕಾರ್ಡ್ ರೂಂ ತಾಲೂಕು ಆಡಳಿತ ಸೌಧದ ನೆಲಮಾಳಿಗೆಯಲ್ಲಿದೆ. ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ. ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲ ಎಂದರು.

ಮಳೆ ನೀರು ಸೋರಿಕೆಯಾಗಿ ನೀರು ನಿಲ್ಲುತ್ತದೆ. ನಿಂತ ನೀರಿನಲ್ಲಿಯೇ ರೈತರು ತಮ್ಮ ದಾಖಲೆ ಪಡೆಯಲು ಗಂಟೆಗಟ್ಟಲೆ ಕಾಯಬೇಕು. ಈ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದಿದ್ದರೂ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಲೋಕೇಶ್, ರೈತರಿಂದ ಹೆಚ್ಚು ಹಣ ಪಡೆಯದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರತಿಯೊಂದು ದಾಖಲೆಗೂ ತಲಾ 10 ರು. ಶುಲ್ಕ ಮಾತ್ರ ಎನ್ನುವ ಫಲಕ ಅಳವಡಿಕೆ, ಕಿರುಕುಳ ನೀಡುವ ಸಿಬ್ಬಂದಿ ವಿರುದ್ಧ ಕ್ರಮ, ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

Share this article