ಕನ್ನಡಪ್ರಭ ವಾರ್ತೆ ಮೈಸೂರುನಗರದ ಕೆ.ಆರ್. ವೃತ್ತದಲ್ಲಿ ಹಾಡಗಲೇ ಯುವಕನೋರ್ವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಹತ್ತಿ ಹುಚ್ಚಾಟವಾಡಿದ್ದಾನೆ.ನಗರದ ಹೃದಯ ಭಾಗದಲ್ಲಿರುವ ಪ್ರತಿಮೆಯ ಮೇಲೆ ಹತ್ತಿ ನಾಲ್ವಡಿ ಅವರ ಭುಜದ ಮೇಲೆ ಕಲ್ಲಿಟ್ಟು ತಲೆಯ ಮೇಲೆ ಕೂರುವ ಯುವಕ ಮತ್ತೆ ಕೆಳಗಿಳಿದು, ತಾನು ಸೇದುವ ಬೀಡಿಯನ್ನು ಪ್ರತಿಮೆಯ ಬಾಯಿಗಿಟ್ಟು ಅಪಮಾನಗೊಳಿಸಿದ್ದಾನೆ. ಬಹುಶಃ ಆತ ಮಾನಸಿಕ ಅಸ್ವಸ್ಥನಿರಬೇಕು ಎಂದು ಶಂಕಿಸಲಾಗಿದೆ.ಯುವಕನ ಉದ್ಧಟತನ ವರ್ತನೆಗೆ ಸಾರ್ವಜನಿಕ ವಲಯದಿಂದ ಬಾರಿ ಖಂಡನೆ ವ್ಯಕ್ತವಾಗಿದೆ. ಕೆಲವರು ಕಂಡು ಕಾಣದಂತೆ ತೆರಳಿದರೆ, ಮತ್ತೆ ಕೆಲವರು ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಆತ ಸ್ಥಳದಿಂದ ಪೇರಿ ಕಿತ್ತಿದ್ದಾನೆ. ನವ ಮೈಸೂರಿನ ನಿರ್ಮಾತೃ ನಾಲ್ವಡಿ ಪ್ರತಿಮೆಗೆ ರಕ್ಷಣೆ ನೀಡುವಂತೆ ಅನೇಕರು ಒತ್ತಾಯಿಸಿದ್ದಾರೆ.