ಬಳ್ಳಾರಿ: ಇನ್ನು ಆರು ತಿಂಗಳೊಳಗೆ ನಗರದಲ್ಲಿ ಅಶ್ವಾರೂಢ ಬಸವಣ್ಣನ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.
ಕೆಲ ತಾಂತ್ರಿಕ ಕಾರಣಗಳಿಂದ ಪ್ರತಿಮೆ ಉದ್ಘಾಟನೆ ವಿಳಂಬವಾಗಿದ್ದು, ಮುಂದಿನ ಬಸವ ಜಯಂತಿ ವರೆಗೆ ಕಾಯದೇ, ಕೇವಲ ಆರು ತಿಂಗಳೊಳಗೆ ಶಾಸಕರ ಸ್ವಂತ ಖರ್ಚಿನಲ್ಲಿ ಭವ್ಯ ಅಶ್ವರೂಢ ಬಸವಣ್ಣನ ಪ್ರತಿಮೆಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಮೆ ಸ್ಥಾಪನೆಗೆ ಬೇಕಾದ ಜಮೀನಿನ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕ್ಯಾಬಿನೆಟ್ ಮಟ್ಟದಲ್ಲಿ ಆಗಬೇಕಾದ ಅನುಮತಿ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿ ಮುಗಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರತ್ ರೆಡ್ಡಿ ಹೇಳಿದರು.ಮೇಯರ್ ಪಿ. ಗಾದೆಪ್ಪ ಮಾತನಾಡಿ, ಬಸವಣ್ಣನವರು ಜಾತಿ-ಮತಗಳ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಲು ‘ಅನುಭವ ಮಂಟಪ'''''''' ಎಂಬ ಸಂಸತ್ತನ್ನು ಸ್ಥಾಪಿಸಿದರು. ಅವರ ವಚನ ಸಾಹಿತ್ಯ ಇಂದಿಗೂ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ವ್ಯಕ್ತಿಗಳನ್ನು ಗಣ್ಯರು ಸನ್ಮಾನಿಸಿದರು. ಇದಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಬಳ್ಳಾರಿಯ ರೇಖಾ ಎಸ್.ವಿ ತಂಡದವರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಮುನ್ನ ನಗರದಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.