ಕನ್ನಡಪ್ರಭ ವಾರ್ತೆ ಅರಕಲಗೂಡು
ವಿದ್ಯಾರ್ಥಿಗಳು ದುಶ್ಚಟಗಳಿಗೆ ಮಾರುಹೋಗದೆ ಶ್ರದ್ಧೆಯಿಂದ ಕಲಿತು ಗುರಿ ಸಾಧಿಸಲು ಪ್ರಯತ್ನಿಸಿದರೆ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣ ಹೊರವಲಯದ ಡಿ.ಕೆ. ಕನ್ವೆನ್ಷನ್ ಹಾಲ್‌ನಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟವಾಗಿದ್ದು ಜವಾಬ್ದಾರಿಯಿಂದ ಹೆಜ್ಜೆ ಇರಿಸಬೇಕು. ವಿವೇಕವಿಲ್ಲದೆ ಸಹವಾಸ ದೋಷ ಬೆಳೆಸಿಕೊಂಡು ದುಶ್ಚಟ ದುರಾಭ್ಯಾಸ ಮಾದಕ ವ್ಯಸನಗಳಿಗೆ ಬಲಿಯಾದರೆ ಸಮಾಜ ದಾರಿ ತಪ್ಪಲಿದೆ. ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಒಳ್ಳೆಯ ಆಹಾರ ಗಾಳಿ ಬೆಳಕು ಮುಖ್ಯ. ಮನಸ್ಸು ಹರಿಬಿಟ್ಟು ಅನ್ಯ ಮಾರ್ಗ ಹಿಡಿಯದೆ ಧನಾತ್ಮಕ ಚಿಂತನೆ ಇಟ್ಟುಕೊಂಡು ಪರಿಶ್ರಮ ವಹಿಸಿ ಕಲಿತು ಬದುಕು ಸಾರ್ಥಕ ಪಡಿಸಿಕೊಂಡು ಪಾಲಕರ ಕನಸು ನನಸಾಗಿಸಬೇಕು ಎಂದರು.ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಲವು ಸವಾಲುಗಳು ಇದ್ದು ಗುರುಗಳ ಮಾರ್ಗದರ್ಶನದಲ್ಲಿ ಓದಿಗೆ ಮಹತ್ವ ಕೊಡಬೇಕು. ಇದಕ್ಕಾಗಿ ವಿಜ್ಞಾನ ಶಾಲೆಗಳನ್ನು ತೆರೆಯಲಾಗಿದೆ. ನಿರ್ಮಲಾನಂದನಾಥ ಶ್ರೀಗಳ ಪಟ್ಟಾಭಿಷೇಕದ ಸವಿನೆನಪಿಗಾಗಿ ಸೆ. 27 ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು. ಹಾಸನ, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಪದವಿ ಪಡೆದು ನಿರುದ್ಯೋಗಿಗಳಾದ ಯುವಕರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಹಾಸನ ವಿವಿ ಕುಲ ಸಚಿವ ಬಿ.ಇ. ಜಗದೀಶ್ ಮಾತನಾಡಿ, ಶಿಸ್ತು ಕಲಿಸುವ ವಿದ್ಯೆಗಿಂತ ದೊಡ್ಡದಿಲ್ಲ. ಸಂಸ್ಕಾರ ಶಿಸ್ತು ಅಳವಡಿಸಿಕೊಂಡರೆ ಯಾವ ಕಾನೂನು ಬೇಕಿಲ್ಲ, ಸಮಾಜ ಶಾಂತಿಯಿಂದ ಇರುತ್ತ. ವಿದ್ಯೆ ಜತೆಗೆ ಉತ್ತಮ ಪ್ರಜೆಯಾಗಿ ಬೆಳೆಯಲು ಏನೇನು ಬೇಕೋ ಅದನ್ನೆಲ್ಲ ಯೋಜನಾಬದ್ಧವಾಗಿ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಓದಿದ್ದನ್ನು ಅರ್ಥೈಸಿಕೊಂಡು ಉತ್ತಮ ಸಾಧಕರಾಗಿ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು. ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಕಲಿತವರು ವಿದ್ಯೆ ಜತೆಗೆ ಸಂಸ್ಕಾರ ಅಳವಡಿಸಿಕೊಂಡು ಸಾಧನೆಯ ಉತ್ತುಂಗಕ್ಕೇರಿದ್ದಾರೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತ ಉನ್ನತ ಸಾಧನೆಯತ್ತ ಸಾಗಿದೆ ಎಂದರು.ಉಪನ್ಯಾಸಕರಾದ ದಶರಥ, ರವಿಕುಮಾರ್ ಮಾತನಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.