ಪ್ರಜ್ವಲ್‌ ಕೇಸ್‌ನಿಂದ ದೂರ ಇರಿ: ಬಿಜೆಪಿಗರಿಗೆ ವರಿಷ್ಠರ ಸೂಚನೆ

KannadaprabhaNewsNetwork | Updated : May 02 2024, 08:32 AM IST

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಸೂಕ್ಷ್ಮವಾಗಿ ವರ್ತಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

 ಬೆಂಗಳೂರು :  ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಸೂಕ್ಷ್ಮವಾಗಿ ವರ್ತಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಚುನಾವಣೆ ವೇಳೆ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗಗೊಂಡು ದೇಶ ಮಾತ್ರವಲ್ಲದೇ, ವಿದೇಶದಲ್ಲೂ ಸಾಕಷ್ಟು ಸುದ್ದಿಯಾಗಿದೆ. ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇರಿಸು-ಮುರಿಸು ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿವಾದ ಸುಳಿಯಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆಯಿಂದ ಇರಬೇಕು ಎಂಬ ನಿರ್ದೇಶನ ನೀಡಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಘಟನೆಯು ಕಾಂಗ್ರೆಸ್‌ ಸಿಕ್ಕಿರುವ ಅಸ್ತ್ರವಾಗಿದೆ. ಜೆಡಿಎಸ್‌ ವಿರುದ್ಧ ಟೀಕೆ ಮಾಡುವಾಗ ಸಹಜವಾಗಿ ಬಿಜೆಪಿ ವಿರುದ್ಧವೂ ಟೀಕೆ ಬರುತ್ತದೆ. ಹೀಗಾಗಿ ಪ್ರಕರಣದ ಬಗ್ಗೆ ಬಿಜೆಪಿ ಎಷ್ಟು ಸಾಧ್ಯವೋ, ಅಷ್ಟರ ಮಟ್ಟಿಗೆ ಅಂತರವನ್ನು ಕಾಯ್ದುಕೊಳ್ಳಬೇಕು. ಜೆಡಿಎಸ್, ಎನ್‌ಡಿಎ ಭಾಗ ಅಷ್ಟೇ ಆಗಿರುವುದರಿಂದ ಜೆಡಿಎಸ್‌ ಮಾಡಿದ ತಪ್ಪಿಗೆ ನಾವು ಹೊಣೆ ಅಲ್ಲ. ತನಿಖೆ ವಿಚಾರದಲ್ಲಿ ಪಕ್ಷದ ನಾಯಕರು ಮಾತಾಡಬಾರದು ಮತ್ತು ವಿವಾದಾತ್ಮಕ ಹೇಳಿಕೆ ಕೊಡಬಾರದು ಎಂದು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಜ್ವಲ್‌ ಚಾಲಕನ ಮಲೇಷ್ಯಾಕ್ಕೆ ಕಳಿಸಿದ್ಯಾರು?: ಎಚ್‌ಡಿಕೆ ಕಿಡಿಸಂಸದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಮಲೇಷಿಯಾದಲ್ಲಿ ಇದ್ದಾನೆ. ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಬುಧವಾರ ಪದ್ಮನಾಭನಗರದಲ್ಲಿನ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸದ ಬಳಿ ಮಾಧ್ಯಮದವರನ್ನು ಕಂಡ ಕುಮಾರಸ್ವಾಮಿ ಸಿಡಿಮಿಡಿಗೊಂಡರು. ನಿನ್ನೆ ಸಂಪೂರ್ಣವಾಗಿ ಒಂದು ಗಂಟೆ ಎಲ್ಲವನ್ನೂ ಹೇಳಿದ್ದೇನೆ. ಮತ್ತೆ ಯಾಕೆ ಬರ್ತೀರಾ? ಸುದ್ದಿ ಬಿಡುವವರು ಯಾರಿದ್ದಾರೆ ಅವರ ಬಳಿ ಹೋಗಿ ಎಂದು ಏರಿದ ಧ್ವನಿಯಲ್ಲಿ ಹೇಳಿದರು.‘ನಾನೂ ನೋಡುತ್ತಿದ್ದೇನೆ. ನಮ್ಮ ಮನೆ ಮುಂದೆ ಸಹ ಕ್ಯಾಮರಾ ಹಾಕಿದ್ದೀರಿ. ಇಲ್ಲೂ ಕ್ಯಾಮರಾ ಹಾಕಿದ್ದೀರಿ. ಯಾಕೆ ಹೀಗೆ ಮಾಡುತ್ತೀರಿ. ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಿ? ಬೆಳಗ್ಗೆ ಮನೆ ಹತ್ತಿರ ಬಂದಿದ್ದಿರಿ? ಈಗ ಇಲ್ಲಿ (ಪದ್ಮನಾಭನಗರ) ಬರ್ತೀರಾ. ಏನು ಕೆಲಸ ನಿಮಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘

ಚಾಲಕ ಕಾರ್ತಿಕ್‌ ಹೇಳಿಕೆಯ ವಿಡಿಯೋ ಬಿಡುಗಡೆಯಾಗಿದೆ. ಆತನಿಂದ ವಿಡಿಯೋ ಬಿಡುಗಡೆ ಮಾಡಿದ್ದು ಯಾರು ಮಾಡಿದರು? ದೇವರಾಜೇಗೌಡನ ಕೈಯಲ್ಲಿ ತಾನು ಕೊಟ್ಟಿದ್ದು ಎಂದು ಚಾಲಕ ಹೇಳಿದ್ದಾನೆ. ಕಾರ್ತಿಕ್‌ ಈಗ ಎಲ್ಲಿದ್ದಾನೆ? ಅವನಿಂದ ವಿಡಿಯೋ ಮಾಡಿಸಿದ್ದರು ಯಾರು? ಕಾರ್ತಿಕ್‌ ಮಲೇಷಿಯಾದಲ್ಲಿದ್ದಾನೆ. ಅವನನ್ನು ಮಲೇಷಿಯಾಕ್ಕೆ ಕಳುಹಿಸಿದ್ದು ಯಾರು? ತರಾತುರಿಯಲ್ಲಿ ಯಾಕೆ ವಿಡಿಯೋ ಬಿಡುಗಡೆ ಮಾಡಿದರು? ನಮ್ಮನ್ನ ಕೆಣಕಿದ್ದಾರೆ. ಏನು ಮಾಡಬೇಕು ಎಂಬುದು ಗೊತ್ತಿದೆ. ಮೊದಲು ಕಾರ್ತಿಕ್‌ ಎಲ್ಲಿದ್ದಾನೆ ಎಂಬುದನ್ನು ಹುಡುಕಿಕೊಳ್ಳಿ’ ಎಂದು ಒಂದೇ ಉಸಿರಿನಲ್ಲಿ ವಾಗ್ದಾಳಿ ನಡೆಸಿದರು.

‘ಚಿಲ್ಲರೆ ಅಣ್ಣ- ತಮ್ಮಂದಿರು ಮಹಾನುಭಾವರು. ಕುಮಾರಸ್ವಾಮಿ ಬಿಟ್ಟಿರುವುದು ಎಂದು 420ಗಳು ಹೇಳಿದ್ದಾರೆ’ ಎಂದು ಡಿ.ಕೆ. ಸಹೋದರರ ವಿರುದ್ಧ ಹರಿಹಾಯ್ದರು.

ಸಿದ್ದು ಅಧಿಕಾರ ಕೊಟ್ರೆ 24 ತಾಸಲ್ಲಿ ಪ್ರಜ್ವಲ್‌ ವಿರುದ್ಧ ಕ್ರಮ: ಅಶೋಕ್‌ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಇಳಿದು ಬಿಜೆಪಿಗೆ ಅಧಿಕಾರ ನೀಡಿದರೆ 24 ಗಂಟೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ನಮ್ಮ ಸಂಸದರಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಜೋಡೆತ್ತು ಎಂದು ಅವರ ಜೊತೆಗೆ ಇದ್ದು ಮೊದಲಿಗೆ ಗೆಲ್ಲಿಸಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷವೇ ಉತ್ತರ ನೀಡಬೇಕು ಎಂದರು.ಪ್ರಜ್ವಲ್‌ ವಿದೇಶಕ್ಕೆ ಹೋಗುವಾಗ ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದರು? ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಕಾಂಗ್ರೆಸ್‌ ಸರ್ಕಾರ ಗುಪ್ತಚರ ದಳ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಲಿ ಎಂದು ಸವಾಲು ಎಸೆದರು.ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬಿಜೆಪಿ ಗೌರವ ನೀಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗೆ ಪಕ್ಷ ಬೆಂಬಲ ನೀಡುವುದಿಲ್ಲ.

 ಬಿಜೆಪಿಯಿಂದ ಕಠಿಣ ಕ್ರಮ ವಹಿಸಲಾಗುತ್ತದೆ. ಅಥವಾ ಪೊಲೀಸ್‌ ಇಲಾಖೆಯ ಮೇಲೆ ಹಿಡಿತ ಇಲ್ಲ ಎಂದು ಕಾಂಗ್ರೆಸ್‌ ಸರ್ಕಾರ ಒಪ್ಪಿಕೊಳ್ಳಲಿ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಏಕೆ ಪ್ರಶ್ನೆ ಮಾಡಬೇಕು? ರಾಜ್ಯದ ಕಾನೂನು ಪಾಲನೆಯನ್ನು ಕೇಂದ್ರ ಸರ್ಕಾರ ಮಾಡಬೇಕೆ ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.ಪ್ರಜ್ವಲ್‌ ಕೇಸು: ಸಂತ್ರಸ್ತರ ಹೇಳಿಕೆಗೆ ಎಸ್‌ಐಟಿ ಯತ್ನಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರು ಎನ್ನಲಾದ ಕೆಲ ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಹೇಳಿಕೆ ಪಡೆಯಲು ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಯತ್ನ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಹಾಸನ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಎಸ್‌ಐಟಿ ಅಧಿಕಾರಿಗಳ ತಂಡವೊಂದು ಅಶ್ಲೀಲ ವಿಡಿಯೋಗಳನ್ನು ಆಧರಿಸಿ ಕೆಲವು ಸಂತ್ರಸ್ತೆಯರನ್ನು ಪತ್ತೆ ಹಚ್ಚಿದ್ದಾರೆ. ಆದರೆ ಸ್ವಯಂ ಪ್ರೇರಿತವಾಗಿ ದೂರು ನೀಡುವುದಕ್ಕಾಗಲಿ ಅಥವಾ ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲು ಸಂತ್ರಸ್ತೆಯರು ನಿರಾಕರಿಸುತ್ತಿದ್ದಾರೆ. ಅಲ್ಲದೆ ಮರ್ಯಾದೆಗೆ ಅಂಜಿ ತನಿಖೆಗೆ ಸಂತ್ರಸ್ತೆಯರ ಕುಟುಂಬದವರು ಸಹಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಹೀಗಾಗಿ ಸಂತ್ರಸ್ತೆಯರನ್ನು ಭೇಟಿಯಾಗಿ ಮನಃಶಾಸ್ತ್ರಜ್ಞರ ಮೂಲಕ ಆಪ್ತ ಸಮಾಲೋಚನೆಗೊಳಪಡಿಸಿ ಬಳಿಕ ಘಟನೆ ಕುರಿತು ಹೇಳಿಕೆ ಪಡೆಯಲು ಎಸ್‌ಐಟಿ ತಂಡ ಪ್ರಯತ್ನಿಸಿದೆ. ಆದರೆ ಕೆಲವು ಸಂತ್ರಸ್ತೆಯರು ಈ ಹಂತದಲ್ಲಿ ಮಾತನಾಡಲು ಮಾನಸಿಕವಾಗಿ ಸಿದ್ಧರಾಗಿಲ್ಲ. ಈ ಹಿನ್ನಲೆಯಲ್ಲಿ ಶೋಷಿತರಿಗೆ ಮಾತನಾಡಲು ಸಮಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಪ್ರಜ್ವಲ್‌ ಸೆಕ್ಸ್‌ ಸೀಡಿ ಬಗ್ಗೆ ಗೌಡರಿಂದ ಮಹತ್ವದ ಸಭೆ:

ಲೋಕಸಭಾ ಚುನಾವಣೆ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ವಿಚಾರ ಸಂಬಂಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಬುಧವಾರ ಪದ್ಮನಾಭನಗರ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌ ಉಪಸ್ಥಿತರಿದ್ದರು.ಪ್ರಜ್ವಲ್‌ ಪ್ರಕರಣದ ಕುರಿತು ದೇವೇಗೌಡರಾದಿಯಾಗಿ ಎಲ್ಲರೂ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬಹುದಾದ ಕಾನೂನು ಹೋರಾಟದ ಬಗ್ಗೆ ಚರ್ಚೆಗಳು ನಡೆದಿರುವ ಸಾಧ್ಯತೆ ಇದೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಒಂದು ವೇಳೆ ಪ್ರಜ್ವಲ್‌ರನ್ನು ಬಂಧಿಸಿದರೆ ಮುಂದಿನ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.ಇದೇ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಮಂಡ್ಯ ಮತ್ತು ಹಾಸನ ಕ್ಷೇತ್ರದಲ್ಲಿ ನಡೆದ ಮತದಾನದ ಪ್ರಮಾಣದ ಕುರಿತು ಚರ್ಚಿಸಿ ಸೋಲು-ಗೆಲುವಿನ ಕುರಿತು ಸಮಾಲೋಚನೆ ನಡೆಸಲಾಯಿತು. ದೇವೇಗೌಡರು ಸಹ ಈ ವೇಳೆ ತಮ್ಮ ರಾಜಕೀಯ ಅನುಭವದ ಮೇಲೆ ಚುನಾವಣೆಯಲ್ಲಿ ಏನಾಗಬಹುದು ಎಂಬುದರ ಕುರಿತು ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.

ಎಸ್‌ಐಟಿ ವಿಚಾರಣೆಗೆ ಎಚ್‌.ಡಿ. ರೇವಣ್ಣ ಗೈರು:

ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್‌.ಡಿ.ರೇವಣ್ಣ ಬುಧವಾರ ಗೈರಾಗಿದ್ದಾರೆ.ಪ್ರಕರಣದ ಕುರಿತು 24 ತಾಸಿನೊಳಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಿಗೆ ಮಂಗಳವಾರ ಎಸ್‌ಐಟಿ ನೋಟಿಸ್ ನೀಡಿತ್ತು. ಅಲ್ಲದೆ ಈ ನೋಟಿಸ್ ಅನ್ನು ಬೆಂಗಳೂರು ಹಾಗೂ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ಸಹ ಪೊಲೀಸರು ಅಂಟಿಸಿದ್ದರು. ಆದರೆ ನೋಟಿಸ್ ಸ್ವೀಕರಿಸಿದರೂ ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಿಲ್ಲ.

ಈ ಸಂಬಂಧ ವಕೀಲರ ಜತೆ ಚರ್ಚಿಸಿ ರೇವಣ್ಣ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿದ್ದ ರೇವಣ್ಣ ಅವರು, ಬುಧವಾರ ಮಧ್ಯಾಹ್ನ ಅಲ್ಲಿಂದ ಬೆಂಗಳೂರಿಗೆ ಮರಳಿ ವಕೀಲರ ಜತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.ವಿದೇಶಯಾನ ಪೂರ್ವಯೋಜಿತ ಸಂಚಲ್ಲ: ಪ್ರಜ್ವಲ್‌ರ ವಕೀಲಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದು ಪೂರ್ವನಿಯೋಜಿತ ಸಂಚು ಎಂಬುದೆಲ್ಲ ಸುಳ್ಳು. ವಿದೇಶಕ್ಕೆ ತೆರಳಿದಾಗ ಅವರ ಮೇಲೆ ಪ್ರಕರಣವು ದಾಖಲಾಗಿರಲಿಲ್ಲ. ಎಸ್‌ಐಟಿಯೂ ರಚನೆಯಾಗಿರಲಿಲ್ಲ ಎಂದು ಪ್ರಜ್ವಲ್‌ ಪರ ವಕೀಲ ಜಿ.ಅರುಣ್ ಹೇಳಿದ್ದಾರೆ.ಬುಧವಾರನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಎಸ್‌ಐಟಿ ನೋಟಿಸ್ ನೀಡಿದ ಹಿನ್ನೆಲೆ ನನ್ನನ್ನು ಸಂಪರ್ಕಿಸಿ ಪ್ರಜ್ವಲ್ ಮಾತನಾಡಿದರು. ಸಾರ್ವಜನಿಕರ ಚರ್ಚೆ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ವಕೀಲ ಹಾಗೂ ಅವರು ಕಕ್ಷಿದಾರ ಎಂಬುದಷ್ಟೇ ನನಗೆ ಮುಖ್ಯವಾಗುತ್ತದೆ ಎಂದರು.

ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಹೊರಟರೆ ಅದೂ ಚರ್ಚೆಯಾಗುತ್ತದೆ. ನನ್ನ ಕಾರ್ಯ ವ್ಯಾಪ್ತಿ ನ್ಯಾಯಾಲಯ. ಅಲ್ಲಿ ನಾನು ವಿವರಣೆ ನೀಡುತ್ತೇನೆ. ಒಂದು ಮಾತ್ರ ಸ್ಪಷ್ಟಪಡಿಸುತ್ತೇನೆ. ಪ್ರಜ್ವಲ್‌ ಅವರು ವಿದೇಶಕ್ಕ ತೆರಳುವ ದಿನ ಎಸ್‌ಐಟಿ ರಚನೆಯಾಗಿರಲಿಲ್ಲ. ಅವರ ವಿರುದ್ಧ ಕೇಸ್ ಸಹ ದಾಖಲಾಗಿರುವುದಿಲ್ಲ. ಹೀಗಾಗಿ ವಿದೇಶಕ್ಕೆ ತೆರಳಿದ್ದು ಪೂರ್ವನಿಯೋಜಿತ ಸಂಚು ಎಂಬುದೆಲ್ಲ ಸುಳ್ಳು ಸಂಗತಿ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್ ವಿರುದ್ಧ ಸಾವಿರನೋ ಎರಡು ಸಾವಿರಾನೋ ವಿಡಿಯೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತದೆ. ಆದರೆ ನಾವು ಪ್ರಬುದ್ಧರಾಗಿದ್ದೇವೆ. ಯಾವುದು ಸತ್ಯ ಎಂಬುದನ್ನು ಜನರ ಆಲೋಚನೆಗೆ ಬಿಡುತ್ತೇನೆ. ಎಷ್ಟು ವಿಡಿಯೋಗಳಿವೆ ಎಂಬುದನ್ನು ನೀವು (ಮಾಧ್ಯಮಗಳು) ಹೇಳಬೇಕು. ನನಗೆ ಆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿರುವುದು ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮಾಹಿತಿ ಅಷ್ಟೇ ಎಂದು ವಕೀಲರು ತೀಕ್ಷ್ಣವಾಗಿ ಹೇಳಿದರು.ವರ್ಷದ ಹಿಂದೆಯೇ ಈ ರೀತಿ ಅವಹೇಳನಕಾರಿ ಕೃತ್ಯಗಳು ತಮ್ಮ ಮೇಲೆ ಬರಬಹುದು ಎಂದು ಪ್ರಜ್ವಲ್ ಗ್ರಹಿಸಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ಎಸ್‌ಐಟಿಗೆ ತನಿಖೆ ಅವರು ಸಹಕರಿಸುತ್ತಾರೆ. ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಿದ್ದೇವೆ. ಇನ್ನು ಇದುವರೆಗೆ ಜಾಮೀನಿಗೆ ಅರ್ಜಿ ಸಹ ಹಾಕಿಲ್ಲ ಎಂದು ತಿಳಿಸಿದರು.ಸತ್ಯ ಆದಷ್ಟು ಬೇಗ ಹೊರಬರಲಿದೆ: ಪ್ರಜ್ವಲ್‌

‘ಸತ್ಯ ಆದಷ್ಟು ಬೇಗ ಹೊರಬರಲಿದೆ’ ಎಂದು ಲೈಂಗಿಕ ಹಗರಣದ ಆರೋಪ ಹೊತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಮತದಾನದ ಬೆನ್ನಲ್ಲೇ ವಿದೇಶಕ್ಕೆ ತೆರಳಿದ್ದ ಅವರು ಇದೇ ಮೊದಲ ಬಾರಿಗೆ ಬುಧವಾರ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ ಸಿಐಡಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ’ ಎಂದಿದ್ದಾರೆ.ಪ್ರಜ್ವಲ್‌ ವಿದೇಶಕ್ಕೆ ಹೋಗುವ ತನಕ ಕತ್ತೆ ಕಾಯುತ್ತಿದ್ರಾ?: ಜೋಶಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗುವವರೆಗೂ ಕತ್ತೆ ಕಾಯುತ್ತಿದ್ದರಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿಕೂಟ ಆದ ಮೇಲೆ ಪ್ರಜ್ವಲ್‌ ಘಟನೆ ನಡೆದಿಲ್ಲ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಎಫ್‌ಐಆರ್‌ ದಾಖಲಿಸಿ ವಿದೇಶಕ್ಕೆ ಹೋಗದಂತೆ ತಡೆಯಬಹುದಿತ್ತು. ಆ ಕೆಲಸವನ್ನೇಕೆ ರಾಜ್ಯ ಸರ್ಕಾರ ಮಾಡಲಿಲ್ಲ. ಇದರಿಂದಲೇ ‘ದಾಲ್‌ ಮೇ ಕುಚ್‌ ಕಾಲಾ ಹೈ’ ಎನ್ನುವುದು ಗೊತ್ತಾಗುತ್ತದೆ. ಆವಾಗ ಇವರು ಕತ್ತೆ ಕಾಯುತ್ತಿದ್ದರಾ? ಎಂದರು.

ಪ್ರಜ್ವಲ್‌ ರೇವಣ್ಣ ಘಟನೆ ಒಂದು ವರ್ಷದಲ್ಲಿ ಆಗಿದೆ ಅಂತ ಅನಿಸುತ್ತಿಲ್ಲ. ಹಿಂದಿನ ಘಟನೆ ಇರಬಹುದು. ಘಟನೆಯನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ಅತ್ಯಂತ ಘೋರ ಅಪರಾಧ ಇದಾಗಿದೆ ಎಂದರು.

ಟಿಕೆಟ್ ಕೊಡುವ ಮುಂಚೆಯೇ ಅಮಿತ್ ಶಾಗೆ ಪ್ರಕರಣದ ಮಾಹಿತಿ ಇತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಟಿಕೆಟ್‌ ಕೊಡಬೇಕಾದರೆ ಎಲ್ಲ ರೀತಿಯ ಚರ್ಚೆಗಳು ನಡೆದಿರುತ್ತವೆ. ಬಹಳಷ್ಟು ಆರೋಪಗಳು ಬಂದಿರುತ್ತದೆ. ಆರೋಪ ಮಾಡಿದವರು ಏನು ಮಾಹಿತಿ ಕೊಟ್ಟಿದ್ದರೋ ಗೊತ್ತಿಲ್ಲ ಎಂದರು.ಕಾಂಗ್ರೆಸ್‌ನವರೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರು. ರೇವಣ್ಣ ಅವರನ್ನು ಸಚಿವರನ್ನಾಗಿ ಮಾಡಿದರು. ನಿಮ್ಮ ಅವರ ನಡುವೆ ಹೊಂದಾಣಿಕೆ ಇರಬಹುದು. ಸರ್ಕಾರ ನಿಮ್ಮ ಕೈಯಲ್ಲೇ ಇದೆ. ಎಫ್‌ಐಆರ್‌ ಮಾಡಲು ವಿಳಂಬ ಮಾಡಿದ್ದೇಕೆ? ಎಫ್‌ಐಆರ್‌ ಮಾಡುವುದು ಬಿಟ್ಟು ಪ್ರತಿಭಟನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿಯೊಬ್ಬರ ಕಾರ್ಯಕ್ರಮಕ್ಕೆ ನುಗ್ಗಿ ಗದ್ದಲ ಮಾಡುವುದು, ಚಪ್ಪಲಿ ಎಸೆಯುವುದು ಕಾಂಗ್ರೆಸ್‌ ಸಂಸ್ಕೃತಿ ತೋರಿಸುತ್ತೆ. ಆರೋಪ ಸಾಬೀತಾದಲ್ಲಿ ಕಠೋರ ಶಿಕ್ಷೆಯಾಗಲಿ. ಅತ್ಯಂತ ನಿಂದನೀಯ ಪ್ರಕರಣವಿದು. ಹಾಗಂತ ತನಿಖೆ ವೇಳೆ ಹಿಂಸಾತ್ಮಕ ಹೋರಾಟ ಸರಿಯಲ್ಲ. ಇದಕ್ಕೆ ಅನುಮತಿ ಕೊಟ್ಟವರು ಯಾರು..? ಎಂದು ಪ್ರಶ್ನಿಸಿದರು.

ವಿಚಾರಣೆಗೆ ಬರದಿದ್ದರೆ ಪ್ರಜ್ವಲ್ ಬಂಧನ: ಪರಂ

ದಾವಣಗೆರೆ: ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಫಾರಂ-41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಪ್ರಜ್ವಲ್‌ ಕರೆತನ್ನಿ: ಮೋದಿಗೆ ಸಿದ್ದು ಪತ್ರ

(ಲೀಡ್‌)- ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡಬೇಕು । ಈ ಮೂಲಕ ಸಂಸದನ ವಾಪಸಾತಿಗೆ ನೆರವಾಗಿ: ಆಗ್ರಹಕನ್ನಡಪ್ರಭ ವಾರ್ತೆ, ಬೆಂಗಳೂರುಹಲವಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಹಾಲಿ ಸಂಸದ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಪಡಿಸಿ ಸ್ವದೇಶಕ್ಕೆ ವಾಪಸ್‌ ಕರೆತರಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಪ್ರಜ್ವಲ್‌ ರೇವಣ್ಣ ಅಶ್ಲೀಲ ಟೇಪ್‌ ಪ್ರಕರಣ ವಿದೇಶಗಳ ಮಟ್ಟದಲ್ಲೂ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮೋದಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಪ್ರಜ್ವಲ್‌ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ವಹಿಸಿದೆ. ಎಸ್‌ಐಟಿ ಹಗಲು ರಾತ್ರಿ ತನಿಖೆ ನಡೆಸಿದೆ. ಈ ನಡುವೆ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲು ರಾಜ್ಯಕ್ಕೆ ಕರೆತರಲು ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಸಂಬಂಧ ಭಯಾನಕ ಮತ್ತು ಅವಮಾನಕರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣ ದೇಶದ ಆತ್ಮಸಾಕ್ಷಿಯನ್ನು ಕಲಕಿದೆ. ಹೀಗಾಗಿ, ರಾಜ್ಯ ಸರ್ಕಾರವು ಏ.28ರಂದು ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಈ ಪ್ರಕರಣದ ತನಿಖೆಯನ್ನು ವಹಿಸಿದೆ. ಈಗಾಗಲೇ ತನಿಖೆ ಕೂಡ ಸರಿಯಾದ ಮಾರ್ಗದಲ್ಲಿ ಶುರುವಾಗಿದ್ದು ಸತ್ಯಾಂಶವನ್ನು ಎಸ್‌ಐಟಿ ಹೊರಗೆಡವಲಿದೆ. ಈಗಾಗಲೇ ಹಲವಾರು ಸಂತ್ರಸ್ತ ಮಹಿಳೆಯರು ಎಸ್‌ಐಟಿ ಮುಂದೆ ತಮ್ಮ ಹೇಳಿಕೆ ದಾಖಲಿಸುತ್ತಿದ್ದಾರೆ, ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್‌ ತನಿಖೆ ಮತ್ತು ಬಂಧನ ಭೀತಿಯಿಂದ ಪ್ರಜ್ವಲ್‌ ವಿದೇಶಕ್ಕೆ ಪಲಾಯನವಾಗಿರುವುದಾಗಿ ವರದಿಯಾಗಿದೆ. ಎಸ್‌ಐಟಿ ತನಿಖೆಗೆ ಸಹಕಾರ ನೀಡುವ ದೃಷ್ಟಿಯಿಂದ ಅವರನ್ನು ವಿದೇಶದಿಂದ ವಾಪಸ್‌ ಕರೆತರುವುದು ಅಗತ್ಯ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ನೆಲದ ಕಾನೂನಿನ ಪ್ರಕಾರ ತನಿಖೆ ಎದುರಿಸಬೇಕಿದೆ. ಹಾಗಾಗಿ ಅವರ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿ ರಾಜತಾಂತ್ರಿಕ ಮತ್ತು ಪೊಲೀಸ್‌ ಮಾರ್ಗದಿಂದ ಅಂತಾರಾಷ್ಟ್ರೀಯ ಪೊಲೀಸರ ನೆರವು ಪಡೆದು ಅವರನ್ನು ಸ್ವದೇಶಕ್ಕೆ ವಾಪಸ್‌ ಕರೆತರಲು ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಕೋರಿದ್ದಾರೆ.ಅಲ್ಲದೆ, ಇದಕ್ಕಾಗಿ ಪ್ರಕರಣ ಎಲ್ಲಾ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಎಸ್‌ಐಟಿ ಸಿದ್ದವಿದೆ. ಅಗತ್ಯವಿರುವ ಇತರೆ ಕಾನೂನು ಔಪಚಾರಿಕತೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವೂ ಬದ್ಧವಾಗಿದೆ ಎಂದು ಹೇಳಿದ್ದಾರೆ.

Share this article