ಕನ್ನಡಪ್ರಭ ವಾರ್ತೆ ಹಾಸನ
ನಗರದ ಪುಷ್ಪಗಿರಿ ಆರೋಗ್ಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಿಳಾ ಘಟಕ, ಜಿಲ್ಲಾ ಮಹಿಳಾ ಘಟಕ ಹಾಸನ ಹಾಗೂ ರೋಟರಿ ಕ್ಲಬ್ ಆಫ್ ಮಿಡ್ ಟೌನ್ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಕುರಿತು ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಆಹಾರ ಪದ್ಧತಿಯೇ ಬಹುತೇಕ ಕಾಯಿಲೆಗಳ ಮೂಲವಾಗಿದೆ. ಬೀದಿ ಬದಿಯ ತರಕಾರಿಗಳು, ಅಸುರಕ್ಷಿತ ಸ್ಥಳಗಳಲ್ಲಿ ಮಾರಾಟವಾಗುವ ಆಹಾರದಿಂದ ಅನೇಕ ಕಲ್ಮಶಗಳು ನಮ್ಮ ದೇಹವನ್ನು ಪ್ರವೇಶಿಸುತ್ತಿವೆ. ಹೃದಯಾಘಾತ, ಕ್ಯಾನ್ಸರ್ ಮುಂತಾದ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ. ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆಯಿಂದ ಮತ್ತು ಶುದ್ಧ ಜೀವನಶೈಲಿಯಿಂದ ಮಾತ್ರ ನಾವು ಆರೋಗ್ಯವಾಗಿರಬಹುದು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಮಿಡ್ ಟೌನ್‌ನ ಮಾಜಿ ಅಧ್ಯಕ್ಷೆ ಡಾ. ಎಚ್.ಜೆ. ತೇಜಸ್ವಿ ಮಾತನಾಡಿ, ಜಂಕ್ ಫುಡ್ ಸೇವನೆಯು ಇಂದಿನ ಪೀಳಿಗೆಯ ಅತ್ಯಂತ ದೊಡ್ಡ ಆರೋಗ್ಯ ಅಪಾಯವಾಗಿದೆ. ಯೋಗ, ಧ್ಯಾನ, ನಡಿಗೆ ಹಾಗೂ ಕ್ರೀಡಾ ಚಟುವಟಿಕೆಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಅಗತ್ಯ ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಆಹಾರದಲ್ಲಿ ರಾಸಾಯನಿಕಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಗುಣಮಟ್ಟದ ಆಹಾರ ಸೇವನೆ ಹಾಗೂ ಇಂತಹ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಫಲ ದೊರೆಯುತ್ತದೆ ಎಂದು ಹೇಳಿದರು.
ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಹೆಲ್ತ್ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅತ್ಯಾವಶ್ಯಕ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ. ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳಲು ನಾವು ಗಮನ ಕೊಡಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೇ ಪರಮೇಶ್ ಮಾತನಾಡಿ, ಇಂತಹ ಆರೋಗ್ಯ ಶಿಬಿರಗಳು ಸಮಾಜದ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಆರೋಗ್ಯ ಸಲಹೆ ನೀಡಿದವರಲ್ಲಿ ಡಾ. ರಂಗಲಕ್ಷ್ಮೀ (ಸ್ತ್ರೀ ರೋಗ ತಜ್ಞೆ, ಲಕ್ಷ್ಮೀ ನರಸಿಂಗ್ ಹೋಮ್) ಹಾಗೂ ಡಾ. ಸೌಮ್ಯ ಮಣಿ (ಮಣಿ ಆಸ್ಪತ್ರೆ) ಉಪಸ್ಥಿತರಿದ್ದು, ಮಹಿಳೆಯರ ಆರೋಗ್ಯದ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಮಯೂರಿ ಲೋಕೇಶ್, ಜಯಶೀಲಾ, ಧನಲಕ್ಷ್ಮೀ ಲೋಕೇಶ್ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ರೋಟರಿ ಸದಸ್ಯರು, ಪುಷ್ಪಗಿರಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.