ರಾಂ ಅಜೆಕಾರು ಕಾರ್ಕಳ : ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಮನೆಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡುವ ಸರ್ಕಾರದ ಮಾರ್ಗಸೂಚಿಯಿಂದ ಕಾರ್ಕಳ-ಹೆಬ್ರಿ ತಾಲೂಕಿನ ಸಾವಿರಾರು ಕುಟುಂಬಗಳಲ್ಲಿ ಮೂಡಿದ್ದ ಆತಂಕಕ್ಕೆ ತಾತ್ಕಾಲಿಕ ಪರಿಹಾರ ದೊರೆತಿದೆ. ಈ ಕುರಿತು ‘ಕನ್ನಡಪ್ರಭ ವರದಿ’ ಹಾಗೂ ಶಾಸಕ ವಿ. ಸುನೀಲ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ವಿಚಾರದ ಬೆನ್ನಲ್ಲೇ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯ ಹಿಂದಿನ ಮಾರ್ಗಸೂಚಿಯನ್ವಯ ಆಸ್ತಿ ತೆರಿಗೆ ನಿರ್ಧರಣೆ ಮತ್ತು ಇ-ಸ್ವತ್ತು 2.0 ತಂತ್ರಾಂಶದಿಂದ ಆಸ್ತಿಗಳನ್ನು ಕೈಬಿಡುವ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಡೆ ನೀಡಿದೆ.ಪಂಚಾಯತ್ ರಾಜ್ ಆಯುಕ್ತಾಲಯವು 8ರಂದು ಹೊರಡಿಸಿರುವ ಆದೇಶದಲ್ಲಿ, 13ರಂದು ಹೊರಡಿಸಿದ್ದ ಮಾರ್ಗಸೂಚಿಯ ಕ್ರಮ 1(ಅ) ಅಡಿಯಲ್ಲಿ ಬರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ರಾಜ್ಯದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದೆ. ಈ ಸೂಚನೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೂ ರವಾನಿಸಲಾಗಿದೆ.
ಸರ್ಕಾರದ ಹಿಂದಿನ ಮಾರ್ಗಸೂಚಿ ಪ್ರಕಾರ, ಅಗತ್ಯ ಹಕ್ಕುಪತ್ರಗಳಿಲ್ಲದ, ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿರುವ ಕೆಲವು ಆಸ್ತಿಗಳನ್ನು ತೆರಿಗೆ ನಿರ್ಧಾರಣೆಯಿಂದ ಕೈಬಿಡುವ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದ ಕಾರ್ಕಳ ತಾಲೂಕಿನ 34,398, ಹೆಬ್ರಿ ತಾಲೂಕಿನ 11,791 ಮನೆಗಳು ಸೇರಿದಂತೆ 46,189 ಆಸ್ತಿಗಳಿಗೆ ಸಂಬಂಧಿಸಿ ಆತಂಕ ವ್ಯಕ್ತವಾಗಿತ್ತು.
ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಕುಟುಂಬಗಳು ವರ್ಷಂಪ್ರತಿ ಗ್ರಾಪಂಗೆ ತೆರಿಗೆ ಪಾವತಿಸುತ್ತಿದ್ದರೂ, ತೆರಿಗೆ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಮುಂದಿನ ದಿನಗಳಲ್ಲಿ ದಾಖಲೆಗಳ ವಿಚಾರದಲ್ಲಿ ಸಮಸ್ಯೆ ಎದುರಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದವು. ಕುಮ್ಕಿ ಜಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ಪಡೆಯುವ ಪ್ರಕ್ರಿಯೆಯಲ್ಲಿನ ತೊಡಕು ಆತಂಕಕ್ಕೆ ಕಾರಣವಾಗಿತ್ತು.ಈ ಸಮಸ್ಯೆಯ ಕುರಿತು ‘ಕನ್ನಡಪ್ರಭ’ ಅ.5ರಂದು ವಿಶೇಷ ವರದಿ ಪ್ರಕಟಿಸಿ, ಕಾರ್ಕಳ-ಹೆಬ್ರಿ ಭಾಗದ ಸಾವಿರಾರು ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಬೆಳಕಿಗೆ ತಂದಿತ್ತು.
ಸರ್ಕಾರದ ಈ ಕ್ರಮದಿಂದ ಕಾರ್ಕಳ–ಹೆಬ್ರಿ ಭಾಗದ ಸಾವಿರಾರು ಕುಟುಂಬಗಳಿಗೆ ಸದ್ಯಕ್ಕೆ ನಿರಾಳತೆ ಸಿಕ್ಕಿದೆ. ಆದರೆ, ಕುಮ್ಕಿ ಸೇರಿದಂತೆ ಹಕ್ಕುಪತ್ರವಿಲ್ಲದ ಜಾಗಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳ ಆಸ್ತಿ ಹಕ್ಕು ಮತ್ತು ದಾಖಲೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕೆಂಬ ನಿರೀಕ್ಷೆ ಮುಂದುವರಿದಿದೆ.ವರದಿಗಳು ಹಾಗೂ ಸರ್ಕಾರ ವಿರುದ್ಧದ ಪ್ರತಿಭಟನೆಯ ಬೆನ್ನಲ್ಲೆ ಆದೇಶವನ್ನು ತಾತ್ಕಾಲಿಕವಾಗಿ ಅದೇಶ ತಡೆಹಿಡಿದಿದೆ. ಕುಮ್ಕಿ ಜಮೀನಿನಲ್ಲಿ ವಾಸಿಸುವವರಿಗೆ ಸರ್ಕಾರ ಮೊದಲು ಹಕ್ಕುಪತ್ರ ನೀಡಬೇಕು.