ಶಿವಳ್ಳಿ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ತಡೆಯಾಜ್ಞೆ

KannadaprabhaNewsNetwork | Published : May 27, 2025 1:16 AM
ಹಾಲು ಉತ್ಪಾದಕರ ಸಂಘಕ್ಕೆ ಮೇ 16ರಿಂದ ಚುನಾವಣೆ ಪ್ರಕ್ರಿಯೆ ಶುರುವಾಗಿತ್ತು. 31ರಂದು ಮತದಾನಕ್ಕೆ ನಿರ್ಧರಿಸಲಾಗಿತ್ತು. ಆದರೆ, ಸಹಕಾರ ಸಂಘಗಳ ಕಾಯ್ದೆ ವಿರುದ್ಧವಾಗಿ ಈ ಚುನಾವಣೆ ನಡೆಯುತ್ತಿದೆ ಎಂದು ಸಂಘದ ಸದಸ್ಯರು ಸಲ್ಲಿಸಿದ ಅರ್ಜಿ ಆಧಾರದ ಮೇಲೆ ಸಂಯುಕ್ತ ನಿಬಂಧಕರು ಚುನಾವಣೆಗೆ ತಡೆಯಾಜ್ಞೆ ನೀಡಿದ್ದಾರೆ.
Follow Us

ಧಾರವಾಡ: ತಾಲೂಕಿನ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಧಾರವಾಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ನಿಯಮಾವಳಿ ಹಾಗೂ ಹೈಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು ಚುನಾವಣೆ ಪ್ರಕ್ರಿಯೆ ನಡೆಸುವಂತೆ ಸೋಮವಾರ ಆದೇಶಿಸಿದ್ದಾರೆ.

ಹಾಲು ಉತ್ಪಾದಕರ ಸಂಘಕ್ಕೆ ಮೇ 16ರಿಂದ ಚುನಾವಣೆ ಪ್ರಕ್ರಿಯೆ ಶುರುವಾಗಿತ್ತು. 31ರಂದು ಮತದಾನಕ್ಕೆ ನಿರ್ಧರಿಸಲಾಗಿತ್ತು. ಆದರೆ, ಸಹಕಾರ ಸಂಘಗಳ ಕಾಯ್ದೆ ವಿರುದ್ಧವಾಗಿ ಈ ಚುನಾವಣೆ ನಡೆಯುತ್ತಿದೆ ಎಂದು ಸಂಘದ ಸದಸ್ಯರು ಸಲ್ಲಿಸಿದ ಅರ್ಜಿ ಆಧಾರದ ಮೇಲೆ ಸಂಯುಕ್ತ ನಿಬಂಧಕರು ಚುನಾವಣೆಗೆ ತಡೆಯಾಜ್ಞೆ ನೀಡಿದ್ದಾರೆ.

ನಿಯಮಾವಳಿ ಪ್ರಕಾರ ಚುನಾವಣೆಯ ದಿನಾಂಕದ 195 ದಿನಗಳ ಪೂರ್ವದಲ್ಲಿ ನೋಂದಾಯಿತ ಅಂಚೆ ಮೂಲಕ ಸಂಘದ ಕಾರ್ಯದರ್ಶಿಗಳು ನೋಟಿಸ್ ನೀಡಬೇಕು. ಆದರೆ, ಶಿವಳ್ಳಿ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ತಮಗೆ ನೋಂದಾಯಿತ ಅಂಚೆ ಮೂಲಕ ನೋಟಿಸ್ ತಲುಪಿಲ್ಲ ಎಂದು ಕಲ್ಲಪ್ಪ ಕಾಳಿ ಎಂಬುವವರು 2024 ನವೆಂಬರ್ 6ರಂದು ತಕರಾರು ಅರ್ಜಿ ಸಲ್ಲಿಸಿದ್ದರು. ಸಂಘದ ಕಾರ್ಯದರ್ಶಿಗಳು ನಿಯಮ ಪಾಲಿಸಿರಲಿಲ್ಲ. ಈ ವಿಚಾರವಾಗಿ ಸಹಕಾರ ಸಂಘಗಳ ಉಪನಿಬಂಧಕರು 2024 ನವೆಂಬರ್ 15ರಂದು ಹೊರಡಿಸಿದ ಆದೇಶದಲ್ಲಿ ಮತದಾನಕ್ಕೆ 179 ಸದಸ್ಯರು ಅರ್ಹರು ಉಳಿದವರು ಅನರ್ಹರು ಎಂದು ಆದೇಶಿಸಿದ್ದರು. ಆದರೆ, ಅದೇ ದಿನ ಮತ್ತೊಂದು ಆದೇಶ ನೀಡಿ ಸಂಘದ ಎಲ್ಲ ಸದಸ್ಯರು ಅರ್ಹರೆಂದು ಆದೇಶಿಸಿರುವುದು ನಿಯಮಗಳ ವಿರುದ್ಧವಾಗಿದೆ. ಇಲ್ಲಿ ಅನರ್ಹ ಸದಸ್ಯರ ಅರ್ಹ ಮಾಡಲು ನೋಟಿಸ್ ನೀಡಿ ದಾಖಲೆ ಪರಿಶೀಲಿಸದೇ ಆದೇಶಿಸಿದ್ದು ಕಾನೂನು ವಿರುದ್ಧವಾಗಿದೆ ಎಂದು ಬೆಳಗಾವಿ ಸಂಯುಕ್ತ ನಿಬಂಧಕರು ಆದೇಶದಲ್ಲಿ ತಿಳಿಸಿದ್ದಾರೆ.

ಮಾತ್ರವಲ್ಲ ನೋಂದಾಯಿತ ಅಂಚೆ ಮೂಲಕ ನೋಟಿಸ್ ನೀಡುವಂತೆ ಹೈಕೋರ್ಟ್ ಆದೇಶಿಸಿದ್ದರು. ಅರ್ಹ ಮತದಾರರ ಪಟ್ಟಿ ಹೊರಡಿಸಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಲಿದೆ. ಇದರಿಂದ ಸಂಘದ ಸದಸ್ಯರಿಗೆ ಅನ್ಯಾಯ ಆಗಲಿದೆ. ಹೀಗಾಗಿ ನಿಯಮಗಳನ್ನು ಪಾಲಿಸುವ ಜತೆಗೆ ಹೈಕೋರ್ಟ್ ಆದೇಶ ಅನುಸರಿಸಿ ಈ ಚುನಾವಣೆ ನಡೆಸುವಂತೆ ಬೆಳಗಾವಿ ಸಂಯುಕ್ತ ನಿಬಂಧಕರು ಸೋಮವಾರ ನೀಡಿದ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಅಭಿನಂದನೆ: ಚುನಾವಣೆಗೆ ತಡೆಯಾಜ್ಞೆ ನೀಡಿರುವ ಇಲಾಖೆ ಕ್ರಮಕ್ಕೆ ಶಿವಳ್ಳಿಯ ಸಂಘದ ಸದಸ್ಯರು ಧನ್ಯವಾದ ತಿಳಿಸಿದ್ದಾರೆ. ರೈತರು ಹಾಗೂ ಧಾಮುಲ್ ಹಿತದೃಷ್ಟಿಯಿಂದ ಈ ನಡೆ ಆಗಬೇಕಿತ್ತು. ಈ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಶಾಸಕ ವಿನಯ ಕುಲಕರ್ಣಿ, ಎನ್.ಎಚ್. ಕೋನರೆಡ್ಡಿ, ಪ್ರಸಾದ ಅಭ್ಯಯ ಅವರಿಗೆ ಶಿವಳ್ಳಿ ಗ್ರಾಮಸ್ಥಾರಾದ ಜಯಣ್ಣ ಮುದ್ದಿ, ಈಶ್ವರಪ್ಪ ಲಂಬಿ, ಶಿವಪ್ಪ ಉಪ್ಪಿನ, ಅಶೋಕ ಬೊಮ್ಮನ್ನವರ, ಬಸವರಾಜ್ ಹುಬ್ಬಳ್ಳಿ, ಮುಗಪ್ಪ ಬಿಲಿಂಗನವರ, ಗುರುನಾಥ ಕಳ್ಳಿಮನಿ, ಶೇಖಪ್ಪ ಚಲವಾದಿ, ದಾಕ್ಷಾಯಿಣಿ ಚಿಕ್ಕಮಠ, ಸುಸವ್ವ ಬೊಮ್ಮಣ್ಣವರ, ಪರಮೇಶ್ವರ ಕಾಳೆ, ಈಶ್ವರ ಶೀವಳ್ಳಿ, ಅರವಿಂದ ಏಗನಗೌಡರ ಧನ್ಯವಾದ ತಿಳಿಸಿದ್ದಾರೆ.