ಕೊಪ್ಪಳ:
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿರಸ್ತೇದಾರ್ ಮಹಾವೀರ ಅಳ್ಳಳ್ಳಿ ಮೂಲಕ ಮನವಿ ಸಲ್ಲಿಸಲಾಯಿತು.
ಹಲವು ದಿನಗಳಿಂದ ಸಾರ್ವಜನಿಕರು ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಹೋರಾಟಗಾರರ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿದಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಿಎಂ ಬಲ್ಡೋಟಾ ಬಿಎಸ್‌ಪಿಎಲ್ ವಿಸ್ತರಣೆ ತಡೆದಿದ್ದಾರೆ. ಈ ನಿರ್ಣಯವನ್ನು ಸ್ವಾಗತಿಸಿದ್ದರು. ಆದರೆ, ಇದೀಗ ಜಪಾನ್‌ನಲ್ಲಿ ಕುಳಿತು ಸುಮಿಟಾವೊ ಕಂಪನಿ ಜತೆಗೆ ಕೊಪ್ಪಳದಿಂದ 10 ಕಿಮೀ ದೂರದ ಗಿಣಿಗೇರಿ, ಕನಕಾಪುರ ಗ್ರಾಮದಲ್ಲಿ ₹ 2,345 ಕೋಟಿ ಹೂಡಿಕೆ ಮಾಡಿ 7 ಲಕ್ಷ ಎಂಟಿಪಿಎ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಈ ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.ಕೊಪ್ಪಳ ಬಳಿ ಈಗಾಗಲೇ ಇರುವ ಕಾರ್ಖಾನೆಗಳಿಂದ ಸಾಕಷ್ಟು ತೊಂದರೆಯಾಗಿವೆ. ಮತ್ತೆ ಹೊಸದಾಗಿ ಯಾವ ಕಾರ್ಖಾನೆಯೂ ಬೇಡ, ವಿಸ್ತರಣೆಯೂ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.