ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಶನಿವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ಧತೆ ಪ್ರೇರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಅಸಾಧ್ಯವಾದುದು ಏನೂ ಇಲ್ಲ. ಗುರು ನಿಮ್ಮ ಭವಿಷ್ಯವನ್ನು ರೂಪಿಸುತ್ತಾರೆ. ಅದಕ್ಕೆ ಗುರುವಿಗೆ ದೇವರ ಸ್ಥಾನವನ್ನು ಕಲ್ಪಿಸಲಾಗಿದೆ ಎಂದರು. ಭವಿಷ್ಯವನ್ನು ರೂಪಿಸಲು ಅಧಿಕ ತಯಾರಿ ನಡೆಸಬೇಕಾಗುತ್ತದೆ. ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಸಮಾಜವನ್ನು ಬೆಳೆಸುವ, ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದ ಅವರು ತಯಾರಿಗೆ ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ಕೂಡಿಗೆ ಡಯಟ್ ಪ್ರಾಂಶುಪಾಲರಾದ ಚಂದ್ರಕಾಂತ್ .ಎಂ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಸ್ನೇಹಿತರನ್ನಾಗಿ ಶಿಕ್ಷಣ ಇಲಾಖೆ ನೋಡುತ್ತಿದೆ. ಈಗಿನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಮತ್ತು ಸೌಲಭ್ಯವಿದೆ. ಪರೀಕ್ಷೆ ಎಂದರೆ ಭಯ ಬೇಡ ಎಂದ ಅವರು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪರವಾಗಿ ಇದೆ ಎಂದರು.
ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸಮಸ್ಯೆ ಇದ್ದರೆ ಪೋಷಕರೊಂದಿಗೆ, ಶಾಲೆಯಲ್ಲಿ ಸಮಸ್ಯೆ ಇದ್ದರೆ ಶಿಕ್ಷಕರೊಂದಿಗೆ, ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ, ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಯ ಏಳಿಗೆಗೆ ಶ್ರಮಿಸಲಾಗುವುದು ಎಂದರು. ವಿದ್ಯಾರ್ಥಿಗಳು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು ಎಂದ ಅವರು ಪ್ರಾಮಾಣಿಕವಾಗಿ ಓದಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣವಾಗುವ ಜವಾಬ್ದಾರಿಯನ್ನು ಹೊಂದಬೇಕು ಎಂದರು.ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ಎಲ್ ಸಿ ಒಂದು ಪ್ರಮುಖ ಘಟ್ಟ. ನಾಪೋಕ್ಲು ಭಾಗದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಮನೋಭಾವನೆ ಕಡಿಮೆ ಇರುವುದು ಕಂಡುಬರುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆಯಿಂದ ಉತ್ತಮವಾಗಿ ಓದದಿದ್ದರೆ ಸಮಸ್ಯೆಯ ಸುಳಿಯೊಳಗೆ ಸಿಲುಕುತ್ತಾರೆ. ಇದನ್ನು ಮನಗಂಡು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ಭಯವಿಲ್ಲದೆ ಎದುರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರೇರಣಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು. ವೇದಿಕೆಯಲ್ಲಿದ್ದ ಗಣ್ಯರು ಹೂವಿನ ಕುಂಡಕ್ಕೆ ನೀರು ಉಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕ ಸಾಹಿತಿ ಭಾರಧ್ವಾಜ ಕೆ.ಆನಂದ, ಸರಕಾರಿ ಪ್ರೌಢಶಾಲೆ, ಕಡಗದಾಳು ಗಣಿತ ಶಿಕ್ಷಕಿ ಎಚ್.ಎನ್.ಭಾರತಿ, ಊ.ರ. ನಾಗೇಶ್ ನಿವೃತ್ತ ಶಿಕ್ಷಕರು ಕುಶಲನಗರ, ಶಿಕ್ಷಣ ಸಂಯೋಜಕ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಶಿವಣ್ಣ ಎಂ.ಎಸ್, ಶಿಕ್ಷಣ ಸಂಯೋಜಕಿ ಜಾನೆಟ್, ಕೊಡಿಗೆ ಡಯಟ್ ನ ಹಿರಿಯ ಉಪನ್ಯಾಸಕ ಸ್ವಾಮಿ, ಬಿಆರ್ ಸಿ ಗುರುರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಸರಳ ಗಣಿತ, ಬೆರಳಿನಿಂದ ಎಣಿಕೆ, ಪ್ರಶ್ನ ಪತ್ರಿಕೆ ವಿನ್ಯಾಸ, ನೀಲಿ ನಕ್ಷೆ ಎಂಬ ವಿಷಯಗಳ ಬಗ್ಗೆ ತಿಳಿಸಿ ಪ್ರತಿ ಪಾಠಗಳಿಗೆ ಹಂಚಿಕೆಯಾಗಿರುವ ಅಂಕಗಳ ಬಗ್ಗೆ ಹಾಗೂ ಒಂದು ವರ್ಷದಲ್ಲಿ ಓದಿದ ವಿಷಯಗಳನ್ನು ಮೂರು ಗಂಟೆಯಲ್ಲಿ ಬರೆಯಬೇಕಾದ ಸವಾಲುಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭ ಎಸ್ ಡಿ ಎಂ ಸಿ ಪದಾಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ನರಿಯಂದಡ ಕೇಂದ್ರ ಪ್ರೌಢಶಾಲೆ, ಕಕ್ಕಬೆ ಪ್ರೌಢಶಾಲೆ, ನೇತಾಜಿ ಪ್ರೌಢಶಾಲೆ, ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.