ವಿಜ್ಞಾನದ ಮೂಲಕ ಸಂಶೋಧನೆಯತ್ತ ಹೆಜ್ಜೆ ಹಾಕಿ: ಪ್ರಾಂಶುಪಾಲರು ಪ್ರದೀಪ್

KannadaprabhaNewsNetwork | Published : Jan 22, 2024 2:20 AM

ಸಾರಾಂಶ

ವಿಜ್ಞಾನ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದು, ಅದರಂತೆ ವಿದ್ಯಾರ್ಥಿಗಳು ಸೂಕ್ಷ್ಮತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ಪ್ರಯೋಗಶೀಲತೆ, ಅನ್ವೇಷಣೆ, ಕುತೂಹಲಗಳು ವಿಜ್ಞಾನದ ಮೂಲಭೂತ ಅಂಶಗಳಾಗಿದ್ದು, ವಿದ್ಯಾರ್ಥಿಗಳಾದ ನೀವು ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಹೊಸ ಸಂಶೋಧನೆಗಳತ್ತ ಹೆಜ್ಜೆ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲೆಂದು ನಿಮಗಾಗಿ ಸೈನ್ಸ್ ಎಕ್ಸ್‌ಪೋ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ನಗರದ ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ. ಪ್ರದೀಪ್ ತಿಳಿಸಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಟೈಮ್ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸೈನ್ಸ್ ಎಕ್ಸ್‌ಪೋ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದು, ಅದರಂತೆ ವಿದ್ಯಾರ್ಥಿಗಳು ಸೂಕ್ಷ್ಮತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು. ವೈಜ್ಞಾನಿಕ ಮನೋಭಾವಗಳನ್ನು ಈ ವಯಸ್ಸಿನಿಂದಲೇ ವೃದ್ದಿಸಿಕೊಂಡು ಪ್ರಸ್ತುತ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ವಿಜ್ಞಾನದ ಬೆಳವಣಿಗೆಯ ಕುರಿತು ಪ್ರೌಢ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ವೈಜ್ಞಾನಿಕ ಮನೋಭಾವ ಹಾಗೂ ಅವರಲ್ಲಿ ಆಸಕ್ತಿ ಮೂಡಿಸಬೇಕೆಂಬ ನಿಟ್ಟಿನಲ್ಲಿ ನಮ್ಮ ಟೈಮ್ಸ್ ಸಂಸ್ಥೆಯು ಈ ಕಾರ್ಯಕ್ರಮನ್ನು ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿಯೂ ನಡೆಸುತ್ತಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಆವಿಷ್ಕಾರ, ವಿಜ್ಞಾನದ ಬೆಳವಣಿಗೆ, ಪ್ರಗತಿಯ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ಮಾರ್ಗದರ್ಶನ ನೀಡಿದರೆ ಮುಂದಿನ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದ್ದು, ನಿಮ್ಮ ಭವಿಷ್ಯವೂ ಸಹ ಸುಗಮವಾಗಲಿದ್ದು, ಇದರಿಂದ ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಉಪಪ್ರಾಂಶುಪಾಲ ಚನ್ನೇಗೌಡ ಮಾತನಾಡಿ, ಅಪರಿಮಿತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯವಾಗಿದ್ದು, ಸಾಧಿಸಲು ಛಲ ಮತ್ತು ಮನಸ್ಸು ಇರಬೇಕು. ವಿದ್ಯಾರ್ಥಿಗಳು ವಿಜ್ಞಾನಿಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಜತೆಗೆ ತಾಂತ್ರಿಕತೆಯ ಜ್ಞಾನವನ್ನೂ ಪಡೆದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜ್ಞಾನ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡು ಸಾಧಿಸಬೇಕೆಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪಾರ್ಥಸಾರಥಿ ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನದ ಬಗ್ಗೆ ಅರಿವು ಮೂಡಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article