ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸೌಲಭ್ಯ ಒದಗಿಸಲು ಕ್ರಮ: ಎಡೀಸಿ ಡಾ.ಎನ್.ಭಾಸ್ಕರ್

KannadaprabhaNewsNetwork |  
Published : May 15, 2025, 02:06 AM IST
ಸಿಕೆಬಿ-4 ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಸಮೀಕ್ಷೆಯ ಜಾಗೃತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಗಿಡಕ್ಕೆ ನೀರುಣಿಸುವ ಮೂಲಕ ಉಧ್ಘಾಟಿಸಿದರು. | Kannada Prabha

ಸಾರಾಂಶ

ಲಿಂಗತ್ವ ಅಲ್ಪ ಸಂಖ್ಯಾತರು ವೈಯಕ್ತಿಕವಾಗಿ ಜಿಲ್ಲಾಸ್ಪತ್ರೆಯಲ್ಲಿರುವ ಘಟಕಕ್ಕೆ ತೆರಳಿ, ಅಲ್ಲಿ ಸಮೀಕ್ಷಕರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡ ಬೇಕು. ಅಲ್ಲಿ ನೀಡುವ ತಮ್ಮ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸದೆ ಗೌಪ್ಯವಾಗಿಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮೀಕ್ಷೆಯ ವೇಳೆ ಲಿಂಗತ್ವ ಅಲ್ಪ ಸಂಖ್ಯಾತರು ತಮ್ಮ ಸಮುದಾಯದ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ನೀವು ನೀಡುವ ಮಾಹಿತಿಯಿಂದ ನಿಮ್ಮ ಜನಸಂಖ್ಯಾನುಗುಣವಾಗಿ ಸರ್ಕಾರಿ ಸೌಲಭ್ಯ ಒದಗಿಸಲು ನೆರವಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.

ನಗರದ ವಾಪಸಂದ್ರ ಬಡಾವಣೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ನಿಸರ್ಗ ಸೊಸೈಟಿ ಮತ್ತು ಕರ್ನಾಟಕ ವಿಕಲಚೇತನರ ಸಂಸ್ಥೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಸಮೀಕ್ಷೆಯ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರು ವೈಯಕ್ತಿಕವಾಗಿ ಜಿಲ್ಲಾಸ್ಪತ್ರೆಯಲ್ಲಿರುವ ಘಟಕಕ್ಕೆ ತೆರಳಿ, ಅಲ್ಲಿ ಸಮೀಕ್ಷಕರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡ ಬೇಕು. ಅಲ್ಲಿ ನೀಡುವ ತಮ್ಮ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸದೆ ಗೌಪ್ಯವಾಗಿಡಲಾಗುವುದು ಎಂದರು.

ಜಿಲ್ಲೆಯಲ್ಲಿ ಸುಮಾರು 2700ಕ್ಕೂ ಹೆಚ್ಚು ಲಿಂಗತ್ವ ಅಲ್ಪ ಸಂಖ್ಯಾತರು ಇದ್ದಾರೆಂಬ ಮಾಹಿತಿ ಇದೆ. ಆದರೆ ಕೇವಲ 64 ಮಂದಿ ಮಾತ್ರ ಗೃಹಲಕ್ಷ್ಮೀ ಫಲಾನುಭವಿಗಳಾಗಿದ್ದಾರೆ. ಇನ್ನು ಉಳಿದವರು ಯಾಕೆ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರನ್ನು ಸಮಾಜದಲ್ಲಿ ಜನ ಕೀಳಾಗಿ ನೋಡುತ್ತಾರೆ. ಅವರಿಗೆ ಮನೆ ಬಾಡಿಗೆಗೂ ನೀಡುವುದಿಲ್ಲ. ಆದ್ದರಿಂದ ನಾನು ಚಿಂತಾಮಣಿಯಲ್ಲಿ ಎರಡು ಎಕರೆ ಜಾಗವನ್ನು ಅವರಿಗೆ ನಿವೇಶನ ನೀಡಲು ಮೀಸಲಿರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಆ ಕಡತ ಏನಾಗಿದೆ ಎಂದು ಪರಿಶೀಲನೆ ಮಾಡುವೆ. ನೆರೆಯ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಒಂದು ಪ್ರತ್ಯೇಕ ಕಾಲೋನಿ ನಿರ್ಮಿಸಿ, ಎಲ್ಲರಿಗೂ ಮನೆ ನೀಡಿದ್ದಾರೆಂಬ ಮಾಹಿತಿ ಬಂದಿದೆ. ಅಲ್ಲಿನ ಮಾಹಿತಿ ತರಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ನೀಡುವುದಕ್ಕೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಟ್ರಾನ್ಸ್‌ ಜೆಂಡರ್ಸ್ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್ಸ್ ನೀತಿ- 2017ಕ್ಕೆ ಪೂರಕವಾಗಿ ಸಮುದಾಯದವರನ್ನು ಮುಖ್ಯ ವಾಹಿನಿಗೆ ತರಲು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಮೂಲ ಹಂತದ ಸಮೀಕ್ಷೆಯನ್ನು ಕೈಗೊಳ್ಳಬೇಕಾಗಿದೆ. ಉದ್ಯೋಗ, ಶಿಕ್ಷಣ ಮೀಸಲಾತಿಯನ್ನು ಒದಗಿಸಲು ಈ ಸಮುದಾಯದ ಜನಸಂಖ್ಯೆ, ಶೈಕ್ಷಣಿಕ ಮಟ್ಟ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿಯು ಅಗತ್ಯವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಸಮೀಕ್ಷೆಯನ್ನು 45 ದಿನಗಳ ಕಾಲ ಕೈಗೊಳ್ಳಲು. ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಜಿಲ್ಲೆಯಲ್ಲೂ ಸಮೀಕ್ಷೆ ನಡೆಯಲಿದ್ದು, ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಅದೇ ಸಮಯದಲ್ಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವುಳ್ಳ ಒಂದು ಸುಸಜ್ಜಿತ ಕೊಠಡಿಯನ್ನು 45 ದಿನಗಳ ಕಾಲಾವಧಿಗೆ ಸಮೀಕ್ಷೆ ನಡೆಸಲು ಸಮೀಕ್ಷಾದಾರರಿಗೆ ಒದಗಿಸಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿಸರ್ಗ ಸಂಸ್ಥೆಯು ಸಮುದಾಯ ಅಧಾರಿತ ಸಂಸ್ಥೆಯಾಗಿದ್ದು, ಸಂಸ್ಥೆಯಲ್ಲಿ ಒಟ್ಟು 2581 ಸಮುದಾಯದವರು ನೋಂದಣಿ ಮಾಡಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಮೀಕ್ಷೆಯಲ್ಲಿ ಎಲ್ಲರೂ ನೋಂದಣಿಯಾಗಬೇಕಾಗಿದೆ. ಸುಮಾರು 150 ಪ್ರಶ್ನೆಗಳನ್ನು ಸಿದ್ಧಪಡಿಸಿದ್ದು ನೋಂದಾಯಿಸಿಕೊಳ್ಳುವ ಟ್ರಾನ್ಸ್ ಜಂಡರ್ಸ್‌ರವರನ್ನು ಸಮೀಕ್ಷಾದಾರರು ಪ್ರತಿ ಪ್ರಶ್ನೆಯನ್ನು ಓದಿ ಉತ್ತರ ಪಡೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಡ್ಯಾಸ್ಕೊ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಡಿ.ಟಿ.ಉಮಾ, ಅನೇಕ ಟ್ರಸ್ಟ್ ನ ಮಲ್ಲು ಕುಂಬಾರ, ಸಾರಥ್ಯ ಒಕ್ಕೂಟದ ಬಸವರಾಜ್, ನಿಸರ್ಗ ಸೊಸೈಟಿಯ ಯಲ್ಲಮ್ಮ, ಕೆವಿಎಸ್ ನ ಕಿರಣ್ ನಾಯಕ್, ಸುಬ್ರಹ್ಮಣ್ಯಂ, ಎಡಿಡಿಯ ಮುರಳೀಧರನ್, ಸಿಡಿಪಿಓ ಗಂಗಾಧರ್ ಮತ್ತಿತರರು ಇದ್ದರು.

ಸಿಕೆಬಿ-4 ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಸಮೀಕ್ಷೆಯ ಜಾಗೃತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ