ಶೀಘ್ರದಲ್ಲಿಯೇ 16 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ

KannadaprabhaNewsNetwork |  
Published : Mar 23, 2025, 01:30 AM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ಸಚಿವ ಮಧುಬಂಗಾರಪ್ಪ | Kannada Prabha

ಸಾರಾಂಶ

ಚುನಾವಣೆಯ ಪೂರ್ವದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ನೀಡಿದ್ದ ಒ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಚುನಾವಣೆಯ ಪೂರ್ವದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ನೀಡಿದ್ದ ಒ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾನು ಕಾಂಗ್ರೇಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದು ಕೊಟ್ಟ ಭರವಸೆಯಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಒ.ಪಿ.ಎಸ್ ಅನ್ನು ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ರಾಜ್ಯದ ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಅಧಿಕ ಅನುದಾನ ನೀಡಿದ್ದು ರಾಜ್ಯದಲ್ಲಿ ಕೆ.ಪಿ.ಎಸ್ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಪ್ರಸ್ತುತವಾಗಿ 300 ಕೆ.ಪಿ.ಎಸ್ ಶಾಲೆಗಳಿದ್ದು ಪ್ರಸ್ತುತ ವರ್ಷದಲ್ಲಿ 500ಕ್ಕೂ ಹೆಚ್ಚು ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದರು. ಅಧುನಿಕ ತಂತ್ರಜ್ಞಾನದಿಂದ ಇಂದಿನ ಮಕ್ಕಳ ಕಲಿಕೆಯಲ್ಲಿ ಕುಂಠಿತವಾಗುತ್ತಿದ್ದು ಮಾನವೀಯ ಮೌಲ್ಯಗಳು ಸಹ ಕ್ಷೀಣಿಸುತ್ತಿವೆ. ಆದ್ದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಭೋದನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ವಾರದಲ್ಲಿ ಎರಡು ದಿನ ನೈತಿಕ ಶಿಕ್ಷಣ, ಎರಡು ದಿನ ಬರವಣಿಗೆ, ಎರಡು ದಿನ ಓದುವ ಹವ್ಯಾಸಗಳ ಬಗ್ಗೆ ತಿಳಿಸಲಾಗುವುದು. ಎಲ್.ಕೆ.ಜಿ, ಯು.ಕೆ.ಜಿ ಶಾಲೆಗಳಿಗೂ ರಾಜ್ಯದಲ್ಲಿ ಅಧಿಕ ಬೇಡಿಕೆ ಇದ್ದು ಅವುಗಳನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ, ಮುಖ್ಯಮಂತ್ರಿಗಳು ಈ ಖಾತೆಯನ್ನು ನನಗೆ ನೀಡುವಾಗ ಈ ಇಲಾಖೆಯಲ್ಲಿ ತುಂಬಾ ಸಮಸ್ಯೆಗಳಿದ್ದು ಅವುಗಳನ್ನು ಹಂತ-ಹಂತವಾಗಿ ಮಾಡೋಣ ಎಂದು ಹೇಳಿದ್ದರು ಅದರಂತೆ ಹಂತ-ಹಂತವಾಗಿ ಇಲಾಖೆಯ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದರು.

ಶಾಲೆಗಳಲ್ಲಿ ಪೆನ್ನು ಹಿಡಿಯುವ ಕೈಗಳಿಗೆ ಪೊರಕೆ ನೀಡುವುದು ಸರಿಯಲ್ಲ ನಮ್ಮ ರಾಜ್ಯದಲ್ಲಿ ಎಲ್ಲಿಯಾದರೂ ವಿದ್ಯಾರ್ಥಿಗಳ ಕೈಯಿಗೆ ಪೊರಕೆ ನೀಡಿದರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅನುಧಾನಿತ ಶಾಲೆಗಳಿಗೆ 6ಸಾವಿರ ಶಿಕ್ಷಕರು, ಕಲ್ಯಾಣ ಕರ್ನಾಟಕ ಭಾಗಕ್ಕೆ 5ಸಾವಿರ ಶಿಕ್ಷಕರು, ಇನ್ನುಳಿದ ಭಾಗಕ್ಕೆ 5ಸಾವಿರ ಶಿಕ್ಷಕರನ್ನು ತೆಗೆದುಕೊಳ್ಳಲು ಈಗಾಗಲೇ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕಿದ್ದು ಸದ್ಯದಲ್ಲಿಯೇ ನೇಮಕಾತಿಯ ಪ್ರಕ್ರಿಯೆ ನಡೆಯಲಿದೆ ಎಂದರು.

ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಧಿಕಾರಿಗಳ ಲೋಪದಿಂದ ವೇತನ ನೀಡುವುದು ವಿಳಂಬವಾಗುತ್ತಿದ್ದು ಸರ್ಕಾರದಲ್ಲಿ ಹಣವಿದ್ದರೂ ಸಹಾ ಅಧಿಕಾರಿಗಳ ಲೋಪದಿಂದ ವೇತನ ಸರಿಯಾಗಿ ಆಗುತ್ತಿರಲಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...