ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನ ಮಲ್ಲಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮದ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪ್ರಯತ್ನ ನಿರ್ವಹಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಪರಿಕಲ್ಪನೆ, ಉದ್ದೇಶ ಮತ್ತು ಇಲಾಖೆಯ ಆಶಯದೊಂದಿಗೆ ಸರ್ಕಾರಿ ಶಾಲೆಯಲ್ಲಿ ಒದಗಿಸುತ್ತಿರುವ ಪ್ರೋತ್ಸಾಹದಾಯಕ ಶೈಕ್ಷಣಿಕ ಸೌಲಭ್ಯಗಳನ್ನು ಪೋಷಕರಿಗೆ ಮನವರಿಕೆ ಮಾಡಿದರು. ಜೊತೆಯಲ್ಲಿ ತಾಲೂಕಿನ ಶಿಕ್ಷಕರಿಗೆ, ಮಕ್ಕಳ ಕಲಿಕಾ ಗುಣಮಟ್ಟ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಹಲವು ಯೋಜನೆಗಳನ್ನು ಫಲಪ್ರದವಾಗಿ ಅನುಷ್ಠಾನಗೊಳಿಸಲು ತಿಳಿಸಿದರು.
ಹಿರಿಯ ಉಪನ್ಯಾಸಕ ಅಶ್ವಥ್ ನಾರಾಯಣ್ ಮಾತನಾಡಿ, ಸರ್ಕಾರಿ ಶಾಲೆಗಳ ಮೇಲಿನ ಅಸಡ್ಡೆ ಬಿಟ್ಟು ಅಲ್ಲಿರುವ ಉತ್ಕೃಷ್ಟ ಮಾನವ ಸಂಪನ್ಮೂಲ, ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವ ನಿರೂಪಣೆಗೆ ಕರೆ ನೀಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಉತ್ತಮ ಪಡಿಸಲು ಶಿಕ್ಷಣ ಇಲಾಖೆಯ ಹಲವಾರು ಯೋಜನೆಗಳನ್ನು ಜಾರಿಗೆತಂದಿದೆ. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸರ್ಕಾರಿ ಶಾಲೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡಬೇಕೆಂದರು.
ಮಧ್ಯಾಹ್ನ ಬಿಸಿಊಟದ ಸಹಾಯಕ ನಿರ್ದೇಶಕ ಗುರುರಾಜ್ , ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ನಿವಾರಣೆಗೆ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಪೌಷ್ಠಿಕ ಬೆಂಬಲದ ಫೋಷಕರಲ್ಲಿ ಅರಿವು ಮೂಡಿಸಿದರು. ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ದಾಖಲಿಸಲು ಪ್ರೇರೇಪಿಸಿದರು.ಮಲ್ಲಾಪುರ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಇಲಾಖೆಯ ಇಸಿಒ, ಬಿಆರ್‌ಪಿ, ಸಿಆರ್‌ಪಿಗಳು, ಎಸ್‌ಡಿಎಂಸಿ ಸದಸ್ಯರು, ಅಡುಗೆ ಸಿಬ್ಬಂದಿ, ಹಳೇ ವಿದ್ಯಾರ್ಥಿಗಳು, ಹತ್ತಿರದ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದರು. ಅಜೀಂ ಪ್ರೇಮ್ ಜೀ ಫೌಂಡೇಶನ್ ಸಂಸ್ಥೆಯ (ಎಪಿಎಫ್) ಪ್ರತಿನಿಧಿಗಳು ಪಾಲ್ಗೊಂಡಿದ್ದರು.