ಕೃಷ್ಣ ಎನ್. ಲಮಾಣಿ
ಹೊಸಪೇಟೆಯಲ್ಲೇ ನ.22ರಂದು ತುಂಗಭದ್ರಾ ಮಂಡಳಿ ಸಭೆ ನಡೆಯಲಿದೆ. ಮಂಡಳಿ ಅಧ್ಯಕ್ಷ ಎಸ್.ಎನ್. ಪಾಂಡೆ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.
ಸಂಸ್ಥೆಯೊಂದಕ್ಕೆ ನೀಡಲು ನಿರ್ಧಾರ:ಜಲಾಶಯದ ಕ್ರಸ್ಟ್‌ಗೇಟ್‌ಗಳ ಗಟ್ಟಿತನ ಅಧ್ಯಯನಕ್ಕಾಗಿ ಪರಿಣತ ಸಂಸ್ಥೆಯೊಂದಕ್ಕೆ ನೀಡಲು ತುಂಗಭದ್ರಾ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಈ ಸಂಸ್ಥೆ ನೀಡುವ ವರದಿ ಆಧಾರದ ಮೇಲೆ ಜಲಾಶಯದ ಗೇಟ್‌ಗಳನ್ನು ಬದಲಿಸುವ ಸಾಧ್ಯತೆ ಇದೆ.
ಗೇಟ್ ಬದಲಾವಣೆಗೆ ಸಿದ್ಧತೆ:
ಜಲಾಶಯದ ಗೇಟ್‌ಗಳನ್ನು ಬದಲಿಸಲು ಈಗಾಗಲೇ ಪರಿಣತ ತಜ್ಞರು ಕೂಡ ಸಲಹೆ ನೀಡಿದ್ದಾರೆ. ಜಲಾಶಯದ 19ನೇ ಗೇಟ್‌ಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಿದ ತಜ್ಞ ಕನ್ನಯ್ಯ ನಾಯ್ಡು ಕೂಡ ಜಲಾಶಯದ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಿದ್ದಾರೆ. ಜೊತೆಗೆ ಸಿಡಬ್ಲ್ಯುಸಿಯ ಪರಿಣತರ ತಂಡ ಕೂಡ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಗೇಟ್‌ಗಳ ಗಟ್ಟಿತನದ ಬಗ್ಗೆ ಅಧ್ಯಯನ ನಡೆಸಲು ಅನುಮೋದನೆ ನೀಡಲು ಮಂಡಳಿ ಮುಂದಾಗಿದೆ.ಜಲಾಶಯದ 32 ಕ್ರಸ್ಟ್ ಗೇಟ್‌ಗಳ ಗಟ್ಟಿತನ, ಜಲಾಶಯದ ಕಾಲುವೆಗಳ ಸ್ಥಿತಿಗತಿ, ಜಲಾಶಯದ ನೀರು ಪ್ರತಿ ವರ್ಷ ಹಚ್ಚಹಸಿರು ಬಣ್ಣಕ್ಕೆ ತಿರುಗುತ್ತಿರುವುದು ಸೇರಿದಂತೆ ಜಲಾಶಯದ ಇನ್ನಿತರ ವಿಷಯಗಳ ಕುರಿತು ಮಂಡಳಿಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಬಾರಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಜಲಾಶಯ ಭರ್ತಿಯಾದ ಬಳಿಕ ನದಿಗೂ ನೀರು ಹರಿಸಲಾಗಿದೆ.
ಜಲಾಶಯದಿಂದ ಕರ್ನಾಟಕದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳು ನೀರು ಪಡೆಯುತ್ತವೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಕೂಡ ನೀರು ಪಡೆಯುತ್ತವೆ. ಒಟ್ಟು 13 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ಜಲಾಶಯ ನೀರು ಒದಗಿಸುತ್ತದೆ. ಈ ಜಲಾಶಯ ಹಾಗೂ ಗೇಟ್‌ಗಳ ಬಲವರ್ಧನೆ ಅತಿ ಮುಖ್ಯವಾಗಿದ್ದು, ಇದಕ್ಕಾಗಿ ತುಂಗಭದ್ರಾ ಜಲಾಶಯದಲ್ಲಿ ನ.22ರಂದು ನಡೆಯಲಿರುವ ಮಂಡಳಿ ಸಭೆ ಮಹತ್ವ ಪಡೆದುಕೊಂಡಿದೆ.ತುಂಗಭದ್ರಾ ಜಲಾಶಯದ ಮಂಡಳಿ ಸಭೆ ನ.22ರಂದು ಹೊಸಪೇಟೆಯಲ್ಲೇ ನಡೆಯಲಿದೆ. ಈ ಸಭೆಯಲ್ಲಿ ಗೇಟ್‌ಗಳ ಸ್ಥಿತಿಗತಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎನ್ನುತ್ತಾರೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ.