ಬಳ್ಳಾರಿ: ರಾಜ್ಯದ ಸ್ಮಾರ್ಟ್ ಸಿಟಿ ಪ್ರಕ್ರಿಯೆಯಲ್ಲಿ ಬಳ್ಳಾರಿ ಜಿಲ್ಲೆ ಸಹ ಒಳಗೊಂಡಿದ್ದು, ಈ ಹಿನ್ನೆಲೆ ಜಿಲ್ಲಾದ್ಯಂತ ಅತ್ಯಾಧುನಿಕ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ತಿಳಿಸಿದರು.
ಬಳ್ಳಾರಿ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಪಾಲಿಕೆಗೆ ಮನವಿ ಮಾಡಿದ್ದು, 118 ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದಂತೆ ಟೆಂಡರ್ ಹಂತದಲ್ಲಿದೆ. ಇದರಿಂದ ನಗರ ಸೇರಿ ಜಿಲ್ಲೆಯಲ್ಲಿ ಕಾನೂನು ಬಾಹಿರ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದರು.
ವಿವಿಧ ಪ್ರಕರಣಗಳ ಆರೋಪಿಗಳ ಪರೇಡ್ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಪನ್ನೇಕರ್, ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡ ಆರೋಪಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಪುನಃ ಕಳ್ಳತನ ಸೇರಿ ಕಾನೂನು ಬಾಹಿರ ಪ್ರಕರಣದಲ್ಲಿಭಾಗಿಯಾದಲ್ಲಿ ಗಂಭೀರ ಪ್ರಕರಣವನ್ನು ದಾಖಲಿಸಲಾಗುವುದು.ನಗರ ಸೇರಿ ಜಿಲ್ಲೆಯಲ್ಲಿ ಮನೆ, ಸಾಧಾರಣ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ ಎಂಒಬಿ ಆರೋಪಿಗಳನ್ನು ಕರೆದು ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ತಮ್ಮ ಹಳೆಯ ವೃತ್ತಿಯನ್ನು ಬಿಟ್ಟು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಜೀವನ ಸಾಗಿಸಲು ಸೂಚಿಸಲಾಗಿದೆ. ಅವರ ಆಧಾರ್ ಕಾರ್ಡ್, ಫೋಟೋ, ವಿಳಾಸದ ಮಾಹಿತಿ, ಫಿಂಗರ್ ಪ್ರಿಂಟ್ ಸೇರಿ ನಾನಾ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ, ಈ ಆರೋಪಿಗಳ ಮೇಲೆ ಪೊಲೀಸ್ ಇಲಾಖೆ ಸದಾ ನಿಗಾವಹಿಸಲಿದ್ದು, ಮನೆ, ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಕಾಲಕಾಲಕ್ಕೆ ಪರಿಶೀಲನೆ ಸಹ ಮಾಡಲಾಗುತ್ತದೆ ಎಂದು ತಿಳಿಸಿದರು. ಬಳ್ಳಾರಿಯ ಡಿಎಆರ್ ಮೈದಾನದಲ್ಲಿ ಕಳ್ಳತನ ಪ್ರಕರಣದ ಆರೋಪಿಗಳ ಪರೇಡ್ ನಡೆಸಿದ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರು ಪುನಃ ಕಳ್ಳತನ ಸೇರಿ ಕಾನೂನು ಬಾಹಿರ ಪ್ರಕರಣದಲ್ಲಿ ಭಾಗಿಯಾಗದಂತೆ ಎಚ್ಚರಿಸಿದರು.