ಕಾರವಾರ: ತಾಲೂಕಿನ ಹಳಗಾ, ಉಳಗಾ, ಹಳಗೇಜೂಗ ಹಾಗೂ ಘಾಡಸಾಯಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿನಿತ್ಯ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಬಿಜೆಪಿ ಮುಖಂಡರ ಸತತ ಹೋರಾಟ ಹಾಗೂ ಅಧಿಕಾರಿಗಳಿಗೆ ನೀಡಿದ್ದ ಗಡುವಿನ ಫಲವಾಗಿ, ಶುಕ್ರವಾರದಿಂದಲೇ ಮತ್ತೆ ಹಣಕೋಣ ಗ್ರಿಡ್‌ನಿಂದಲೇ ವಿದ್ಯುತ್ ಪೂರೈಕೆ ಆರಂಭವಾಗಿದೆ.ಈ ಭಾಗದ ಗ್ರಾಮಗಳಿಗೆ ಮೊದಲಿನಿಂದಲೂ ಹಣಕೋಣ ಗ್ರಿಡ್‌ನಿಂದ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಏಕಾಏಕಿ ಕದ್ರಾ ಗ್ರಿಡ್‌ನಿಂದ ಸಂಪರ್ಕ ಕಲ್ಪಿಸಲಾಗಿತ್ತು. ಇದರಿಂದಾಗಿ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಉಂಟಾಗಿ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಘಾಡಸಾಯಿ ಗ್ರಾಪಂ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಚೇತನ್ ಬಾಂದೇಕರ್ ಮತ್ತು ಯುವ ಮುಖಂಡ ಸಂತೋಷ್ ಗೋವೇಕರ್ ನೇತೃತ್ವದ ನಿಯೋಗ, ಮೇ 16ರಂದು ಕಾರವಾರದ ಹೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿತ್ತು. ಸಾರ್ವಜನಿಕರ ಪರದಾಟವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದ ಮುಖಂಡರು, ಕೂಡಲೇ ಕದ್ರಾ ಗ್ರಿಡ್ ಸಂಪರ್ಕ ಕಡಿತಗೊಳಿಸಿ, ಹಳೆಯ ಹಣಕೋಣ ಗ್ರಿಡ್‌ನಿಂದಲೇ ವಿದ್ಯುತ್ ಒದಗಿಸುವಂತೆ ಪಟ್ಟು ಹಿಡಿದಿದ್ದರು. ಮುಖಂಡರ ತೀವ್ರ ಒತ್ತಾಯಕ್ಕೆ ಸ್ಪಂದಿಸಿದ್ದ ಹೆಸ್ಕಾಂ ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಸರಿಪಡಿಸಲು ಒಂದು ವಾರದ ಕಾಲವಕಾಶ ಕೋರಿದ್ದರು. ಅಲ್ಲದೆ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವ ಖಚಿತ ಭರವಸೆ ನೀಡಿದ್ದರು.
ಇದೀಗ ತಾವು ನೀಡಿದ ಭರವಸೆಯಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಶುಕ್ರವಾರ ರಾತ್ರಿಯಿಂದಲೇ ಹಣಕೋಣ ಗ್ರಿಡ್ ಮೂಲಕ ಸುಗಮ ವಿದ್ಯುತ್ ಪೂರೈಕೆ ಮಾಡುವುದಾಗಿ ಚೇತನ್ ಬಾಂದೇಕರ್ ಹಾಗೂ ಸಂತೋಷ್ ಗೋವೇಕರ್ ಅವರಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.ದೀರ್ಘಕಾಲದ ಸಮಸ್ಯೆಗೆ ಸ್ಪಂದಿಸಿ, ನೀಡಿದ ಗಡುವಿನೊಳಗೆ ವ್ಯವಸ್ಥೆಯನ್ನು ಸರಿಪಡಿಸಿದ ಹೆಸ್ಕಾಂ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧನ್ಯವಾದ ಅರ್ಪಿಸಿದ್ದಾರೆ. ಘಾಡಸಾಯಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಕೋಠಾರಕರ್, ಪ್ರಮುಖರಾದ ಸುಧಾ ಶ್ಯಾಮ್ ನಾಯ್ಕ, ಚಂದಾ ನಾಯ್ಕ, ಗ್ರಾಪಂ ಸದಸ್ಯರಾದ ಕಿರಣ್ ಹುಳ್ಗೇಕರ್, ಶರದ್ ನಾಯ್ಕ, ಮಂಗೇಶ್ ಗೋವೇಕರ್, ಬಾಲ್ಟಿಷ್ ಬೆರೆಟೊ ಇದ್ದರು.