ಕನ್ನಡಪ್ರಭ ವಾರ್ತೆ ಹೊಳೆನರಸೀಪುರಗ್ರಾಮೀಣ ಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ ಜನರು ಹಾಗೂ ಜಾನುವಾರುಗಳು ತತ್ತರಿಸಿ ಹೋಗುತ್ತಿದ್ದು, ತಾಲೂಕಿನ ಮೂರು ಹೋಬಳಿಯ ೨೬ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೊದಲಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತುರ್ತ್ತಾಗಿ ಕೈಗೊಳ್ಳುವಂತೆ ಶಾಸಕ ಎಚ್. ಡಿ. ರೇವಣ್ಣ ಅವರು ತಾಲೂಕು ಪಂಚಾಯ್ತಿ ಇಒ ಮುನಿರಾಜುಗೆ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ತುರ್ತು ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳು, ಅಕ್ಕಿಪಿಕ್ಕಿ ಜನಾಂಗದವರು, ಹಾಗೂ ಕೂಲಿ ಕಾರ್ಮಿಕರು, ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ನಿರ್ಗತಿಕರಿಗೂ ತೊಂದರೆಯಾಗಂತೆ ನೀರಿನ ವ್ಯವಸ್ಥೆ ಮಾಡಬೇಕಾದ್ದು ನಿಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪಿಡಿಒಗಳಿಗೆ ತಿಳಿಸಿದರು.ಅಗತ್ಯ ನೀರಿನ ವ್ಯವಸ್ಥೆಗೆ ತುರ್ತು ಕ್ರಮಕೈಗೊಳ್ಳುವ ಸಲುವಾಗಿ ೨೬ ಗ್ರಾ.ಪಂ.ಗಳಲ್ಲಿ ಕೆಟ್ಟಿರುವ ಬೋರ್‌ವೆಲ್ ರಿಪೇರಿ, ಬೋರ್ ವೆಲ್ ಇಲ್ಲದ ಕಡೆಗಳಲ್ಲಿ ಅಗತ್ಯ ನೀರಿನ ವ್ಯವಸ್ಥೆಗೆ ಟ್ಯಾಂಕರ್‌ನಿಂದ ನೀರು ಪೂರೈಕೆ ಮತ್ತು ಪೈಪ್ ಲೈನ್ ಅಗತ್ಯ ಇರುವ ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಲು ಒಂದು ಗ್ರಾ.ಪಂ.ಗೆ ೧೦ ಲಕ್ಷ ರು.ಗಳಂತೆ ೨.೬ ಕೋಟಿ ರು. ಅಗತ್ಯವಿದ್ದು, ಇದರ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಕೋರುವುದಾಗಿ ತಿಳಿಸಿದರು. ಪುರಸಭೆಯ ೯೦ಕ್ಕೂ ಹೆಚ್ಚು ಮಳಿಗೆಗಳು ಕಾಲಿ ಇದ್ದು, ಪುನಂ ಟೆಂಡರ್ ಕರೆಯಲು ಸೂಚಿಸಿದ್ದೇವೆ ಜತೆಗೆ ಮಳಿಗೆಗಳ ಬಾಡಿಗೆ ಬಾಕಿಯನ್ನು ವ್ಯಾಪಾರಿಗಳಿಂದ ಕಟ್ಟುನಿಟ್ಟಾಗಿ ವಸೂಲಿ ಮಾಡಲು ತಿಳಿಸಿದ್ದು, ಹಣ ನೀಡದೇ ಹೋದರೆ ನಿರ್ದಾಕ್ಷಿಣ್ಯವಾಗಿ ಮಳಿಗೆಗೆ ಬೀಗ ಹಾಕುವಂತೆ ಸೂಚಿಸಲಾಗಿದೆ ಎಂದರು. ತಾಲೂಕಿನಲ್ಲಿ ೨೬ ಗ್ರಾಮ ಪಂಚಾಯ್ತಿಗಳು ಇದ್ದು, ಏಳು ಪಿಡಿಒಗಳು ಮಾತ್ರ ಸಭೆಯಲ್ಲಿ ಇದ್ದರು, ಉಳಿಕೆ ಪಿಡಿಒ ಗೈರಿನ ಬಗ್ಗೆ ಶಾಸಕರು ಪ್ರಶ್ನಿಸಿದಾಗ ಅಧಿಕಾರಿಗಳು ಉತ್ತರ ನೀಡಿದರು. ಆದರೆ ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳ ನೇಮಕ ಆಗಿರುವಾಗ ಶಾಸಕರು ಕರೆದ ಸಭೆಗೆ ಪಿಡಿಒಗಳ ಗೈರು ಚರ್ಚೆಗೆ ಕಾರಣವಾಗಿದೆ. ತಾಲೂಕು ಪಂಚಾಯ್ತಿ ಇಒ ಮುನಿರಾಜು, ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಸೋಮಶೇಖರ್, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶ್, ಇತರರು ಇದ್ದರು.===============