ಏಕಗವಾಕ್ಷಿಯಡಿ ಒಂದೇ ಸೂರಿನಡಿ ಸೌಲಭ್ಯ ನೀಡಲು ಕ್ರಮ

KannadaprabhaNewsNetwork |  
Published : Aug 31, 2025, 01:08 AM IST
ಏಕಗವಾಕ್ಷಿಯಡಿ ಒಂದೇ ಸೂರಿನಡಿ ಸೌಲಭ್ಯಗಳನ್ನು ಒದಗಿಸಲು ಕ್ರಮ-ಶಿಲ್ಪಾನಾಗ್ | Kannada Prabha

ಸಾರಾಂಶ

ಏಕಗವಾಕ್ಷಿಯಡಿ ಆದಿವಾಸಿಗಳಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಏಕಗವಾಕ್ಷಿಯಡಿ ಆದಿವಾಸಿಗಳಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬೆಂಗಳೂರು ಸಮತ್ವ ಟ್ರಸ್ಟ್ ಹಾಗೂ ಅಶೋಕ ಪರಿಸರ ಸಂಶೋಧನೆ ಮತ್ತು ಪರಿಸರ ವಿಜ್ಞಾನದತ್ತಿ ಜಿಲ್ಲಾ ಹಾಗೂ ತಾಲೂಕು ಸೋಲಿಗ ಸಂಘ, ರಾಜ್ಯಸೋಲಿಗ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಶನಿವಾರ ನಡೆದ ಆದಿವಾಸಿ ಕಾಲೇಜು ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗಿರಿಜನರಿಗೆ ಸರ್ಕಾರ ವಿವಿಧ ಇಲಾಖೆಗಳ ಮೂಲಕ ವಿವಿಧ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಅವರಿಗೆ ತಲುಪಿಸುವಲ್ಲಿ ಗೊಂದಲವೇರ್ಪಟ್ಟಿದೆ. ಇದರಿಂದ ಗಿರಿಜನರಿಗೆ ಸಮರ್ಪಕವಾಗಿ ಸೌಲಭ್ಯ ಸಿಗುತ್ತಿಲ್ಲ. ಎಲ್ಲ ಇಲಾಖೆಗಳ ಸೌಲಭ್ಯ ಒಂದೆಡೆ ಸಿಗಬೇಕು ಎಂಬ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದರು.

ಜಿಲ್ಲೆಯಲ್ಲಿನ ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಗಿರಿಜನರ ಆರೋಗ್ಯ ಸುಧಾರಣೆಗೆ ಹಿಂದಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯವರು ರಾಜ್ಯದಲ್ಲೇ ಪ್ರಥಮ ಬಾರಿಗೆ ’ಗಿರಿಜನ ಆರೋಗ್ಯ ನಾವಿಕರು’ಎಂಬ ಯೋಜನೆ ರೂಪಿಸಿದ್ದರು. ಈಗಲೂ ಅದು ಮುಂದುವರೆಯುತ್ತಿದ್ದು, ಗಿರಿಜನರು ಇದರ ಸದ್ಬಳಕೆಗೆ ಮುಂದಾಗಬೇಕು. ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸೋಲಿಗರ ಸಾಧನೆ ಮಾಡಿರುವವರು ನಿಮಗೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಇದು ನಿಮಗೆ ಸ್ಪೂರ್ತಿ ನೀಡಬೇಕು ಎಂದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಮಾತನಾಡಿ, ಆದಿವಾಸಿಗಳ ಸಮಸ್ಯೆ ಬಂದಾಗ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಆದಿವಾಸಿ ಸಂಘಸಂಸ್ಥೆಗಳ ಪದಾಧಿಕಾರಿಗಳು ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಗಿರಿಜನ ಮಕ್ಕಳು ಇತರೇ ಸಮುದಾಯದ ವಿದ್ಯಾರ್ಥಿಗಳ ಜತೆ ಬೆರೆಯಬೇಕು, ಇದರಿಂದ ತಾವು ಸಮಾಜದ ಮುಖ್ಯವಾಹಿನಿಗೆ ಬರುವ ವಾತಾವರಣ ನಿರ್ಮಾಣವಾಗುತ್ತದೆ. ಗಿರಿಜನರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮತ್ವ ಟ್ರಸ್ಟ್ ಹಾಗೂ ಅಶೋಕ ಪರಿಸರಸಂಶೋಧನೆ ಮತ್ತು ಪರಿಸರವಿಜ್ಞಾನದತ್ತಿ ಪ್ರಾಧ್ಯಾಪಕ ಡಾ.ಆರ್. ಸಿದ್ದಪ್ಪಶೆಟ್ಟಿ ’ಏಟ್ರಿ ಸಂಸ್ಥೆ ಕಳೆದ ೩೦ ವರ್ಷಗಳಿಂದ ಗಿರಿಜನರ ಅಭಿವೃದ್ದಿ ಜತೆಗೆ ಅರಣ್ಯ ಸಂರಕ್ಷಣೆಗೂ ಒತ್ತು ನೀಡುತ್ತಿದೆ. ಪ್ರಾಥಮಿಕ ಶಾಲಾಮಕ್ಕಳು, ಅರ್ಧದಲ್ಲೇ ಶಾಲೆಬಿಟ್ಟಮಕ್ಕಳು ಮತ್ತೇ ಶಾಲೆಗೆ ಸೇರುವ ಹಾಗೇ ಪ್ರೋತ್ಸಾಹಿಸಲು ೧೫ ಲಕ್ಷ ರು. ನರ್ಸಿಂಗ್ ಕೋರ್ಸ್ ಮಾಡುವವರಿಗೆ ೫೦ ಸಾವಿರ ರು.ವಿದ್ಯಾರ್ಥಿ ವೇತನವನ್ನು ಸಂಸ್ಥೆಯಿಂದ ನೀಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ೨೫೦ ವಿದ್ಯಾರ್ಥಿಗಳ ಪೈಕಿ ಸಮರ್ಪಕ ದಾಖಲೆ ಸಲ್ಲಿಸಿದ್ದ ೧೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಚೆಕ್‌ಗಳನ್ನು ವಿತರಿಸಲಾಯಿತು. ಮೈಸೂರು ವಿವಿ ಸೈಕಾಲಜಿ ವಿಭಾಗದ ಪ್ರಾಧ್ಯಾಪಕ ವೆಂಕಟೇಶ್ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ರಾಷ್ಟ್ರ ಪಶಸ್ತಿ ಪುರಸ್ಕೃತ ಮಧುಸೂಧನ್ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ. ಸಿಇಒ ಮೋನಾ ರೋತ್, ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಸಮತ ಟ್ರಸ್ಟ್ ಅಧ್ಯಕ್ಷ ಎಸ್.ಶ್ರೀನಿವಾಸ್, ಸುಭಾಷ್, ಏಟ್ರಿ ಸಂಸ್ಥೆ ಸಂಶೋಧಕ ಡಾ.ಸಿ.ಮಾದೇಗೌಡ, ಜಿಲ್ಲಾಬುಡಕಟ್ಟು ಗಿರಿಜನಅಭಿವೃದ್ದಿ ಸಂಘದ ಅಧ್ಯಕ್ಷ ಯು.ರಂಗೇಗೌಡ, ಚಾಮರಾಜನಗರ ತಾಲೂಕು ಸೋಲಿಗ ಅಭಿವೃದ್ದಿ ಸಂಘದ ಅಧ್ಯಕ್ಷ ಕೋಣೂರೇಗೌಡ, ಹನೂರುಘಟಕದ ದೊಡ್ಡಸಿದ್ದಯ್ಯ, ಗುಂಡ್ಲುಪೇಟೆ ಲ್ಯಾಂಪ್ ಸೊಸೈಟಿ ಅಧ್ಯಕ್ಷೆ ನಾಗಮ್ಮ, ಪುಟ್ಟಮ್ಮ, ಮಹದೇವಮ್ಮ ಭಾಗವಹಿಸಿದ್ದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?