ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಸತಿ ರಹಿತರಿಗೆ ನಿವೇಶನ ಒದಗಿಸಲು ಕ್ರಮ

KannadaprabhaNewsNetwork |  
Published : Mar 08, 2025, 12:31 AM ISTUpdated : Mar 08, 2025, 01:05 PM IST
ಪೋಟೋ: 07ಎಸ್‌ಎಂಜಿಕೆಪಿ08ಶಿವಮೊಗ್ಗದ ಸೂಡಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿದರು. | Kannada Prabha

ಸಾರಾಂಶ

 ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಠ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಠ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಹೊರವಲಯದಲ್ಲಿರುವ ಗೋಪಿಶೆಟ್ಟಿಕೊಪ್ಪದಲ್ಲಿ ಈಗಾಗಲೇ 104 ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಆ ಪೈಕಿ ಈಗಾಗಲೇ 30 ಎಕರೆ ಭೂಮಿಯ ಮಾಲೀಕರು 50:50 ಅನುಪಾತದಲ್ಲಿ ನಿವೇಶನವನ್ನು ಹಸ್ತಾಂತರಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದು, ಭೂಪರಿವರ್ತನೆಗೆ ಸರ್ಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಉಳಿದ ಭೂಮಿಯ ಭೂಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕ್ರಮ ವಹಿಸಲಾಗುವುದು. ಸಮಾಲೋಚನೆಯ ನಂತರವೂ ಭೂಮಿಯನ್ನು ಪ್ರಾಧಿಕಾರಕ್ಕೆ ನೀಡಲು ಹಿಂದೆ ಸರಿದಲ್ಲಿ ಅಂತಹ ಮಾಲೀಕತ್ವದ ಭೂಮಿಯನ್ನು ನಿಯಮಾನುಸಾರ ಭೂಸ್ವಾದೀನಪಡಿಸಿಕೊಂಡು ಸರ್ಕಾರದ ಅನುಮತಿ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದರು.

ಅಲ್ಲದೇ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಕನಿಷ್ಠ 1.20 ಎಕರೆಗಿಂತ ಹೆಚ್ಚಿನ ಭೂಮಿಯನ್ನು 50:50 ಅನುಪಾತದಲ್ಲಿಯಾದರೂ ಸರಿ ಅಥವಾ ಸಂಪೂರ್ಣ ಮಾಲೀಕತ್ವವನ್ನು ವಹಿಸಿಕೊಡಲು ಇಚ್ಛಿಸಿದಲ್ಲಿ ಸೂಡಾ ವತಿಯಿಂದ ಉತ್ತಮ ಬೆಲೆಗೆ ಖರೀದಿಸಿ, ಬಡಾವಣೆ ಸೃಜಿಸಿ, ಅರ್ಹರಿಗೆ ನಿವೇಶನ ವಿತರಿಸಲು ಕ್ರಮ ವಹಿಸಲಾಗುವುದು. ೧೦೦ ಎಕರೆ ಭೂಮಿ ಖರೀದಿಸಲು ಸೂಡಾ ಸಿದ್ಧವಾಗಿದ್ದು, ಅದಕ್ಕಾಗಿ 70 ಕೋಟಿ ರು.ಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಇದಲ್ಲದೇ ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಅಭಿವೃದ್ಧಿ, ಇತ್ಯಾದಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಿರ್ವಹಿಸಲಾಗುವುದು ಎಂದ ಅವರು, ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಜೆ.ಎಚ್.ಪಟೇಲ್‌ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಗೋಪಿಶೆಟ್ಟಿಕೊಪ್ಪ, ನಿಧಿಗೆ ಮಾಚೇನಹಳ್ಳಿ, ಸೋಮಿನಕೊಪ್ಪದಲ್ಲಿ ವಸತಿ ಸಮುಚ್ಛಯ, ಊರುಗಡೂರಿನ ಪ್ರಾಧಿಕಾರದ ವಸತಿ ಬಡಾವಣೆಯಲ್ಲಿ ಇರುವ 04 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಪ್ರಾಧಿಕಾರದ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಅದಕ್ಕಾಗಿ ಒಂದು ಕೋಟಿ ರು.ಗಳನ್ನು ಕಾಯ್ದಿರಿಸಲಾಗಿದೆ. ನಗರದ ಹೊರವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ 4.10 ಕೋಟಿ ರು.ಗಳನ್ನು ಹಾಗೂ ಸೂಡಾ ಪ್ರದೇಶ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗಾಗಿ 3 ಕೋಟಿ., ಪ್ರಾಧಿಕಾರದ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆಗೆ ೩ ಕೋಟಿ ರು.ಗಳನ್ನು ಕಾಯ್ದಿರಿಸಲಾಗಿದೆ. 

ಈ ಉದ್ಯಾನವನಗಳನ್ನು ಅಲ್ಲಿನ ನಿವಾಸಿಗಳೇ ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ನಿವಾಸಿಗಳೋಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೇ ನಗರದ ಆಯ್ದ ಕಡೆಗಳಲ್ಲಿ ಆಟೋ-ಬಸ್‌ನಿರ್ಮಾಣ ಕಾಮಗಾರಿಗಳು, ಇತರೆ ಮೂಲಭೂತ ಸೌಕಕರ್ಯಗಳ ಅಭಿವೃದ್ಧಿಗಾಗಿ ೫ ಕೋಟಿ ಹಾಗೂ ಸೂಡಾ ಕಚೇರಿಯಲ್ಲಿನ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರೀಸಲು 50 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನ ಪರವಾಗಿದ್ದು, ಸಮಾಜದ ಎಲ್ಲ ಸ್ತರಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆ, ಮಕ್ಕಳು, ಶಿಕ್ಷಣ, ಕೃಷಿ, ನೀರಾವರಿ ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಜನಸ್ನೇಹಿ ಬಜೆಟ್‌ ರೂಪಿಸಿ, ಮಂಡಿಸಿರುವ ಮಾನ್ಯಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸೂಡಾ ನಿರ್ದೇಶಕರಾದ ಸಿದ್ದಪ್ಪ, ಪ್ರವೀಣ್ ಕುಮಾರ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''