ಎಬಿಸಿ ಕಾಯ್ಎ ಅನ್ವಯ ಪುರಸಭೆ ವ್ಯಾಪ್ತಿಯಲ್ಲಿ ಶಿವಮೊಗ್ಗ ಪಶು ವೈದ್ಯಾಧಿಕಾರಿಗಳ ಕ್ರಮ । 50ಕ್ಕೂ ಹೆಚ್ಚು ನಾಯಿಗಳಿಗೆ ಆಪರೇಷನ್
ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಗೊಳಿಸುವ ಉದ್ದೇಶದಿಂದ ಸರ್ಕಾರದ ಪ್ರಾಣಿ ಜನನ ನಿಯಂತ್ರಣ (ಅನಿಮಲ್ ಬರ್ತ್ ಕಂಟ್ರೋಲ್-ಎಬಿಸಿ) ಕಾಯ್ದೆ ಅನ್ವಯ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಯಿತು. ಶಿವಮೊಗ್ಗದ ಪಶುವೈದ್ಯಾಧಿಕಾರಿಗಳ ತಂಡದ ನೇತೃತ್ವದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸಹಾಯಕ ವೈದ್ಯರು ಸೇರಿ ಒಟ್ಟು 50ಕ್ಕೂ ಹೆಚ್ಚು ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದರು.
ನಾಯಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಹಿಡಿದು, ಅವುಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಹೆಣ್ಣು ಹಾಗೂ ಗಂಡು ನಾಯಿಗಳನ್ನು ಪ್ರತ್ಯೇಕಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ, ನಾಯಿಗಳನ್ನು ವಿಶೇಷ ಬೋನಿನಲ್ಲಿ ಮೂರು ದಿನಗಳ ಕಾಲ ವೈದ್ಯಕೀಯ ಪೂರಕ ಚಿಕಿತ್ಸೆಗೆ ಒಳಪಡಿಸಲಾಗುವುದು. ಅವು ಸಂಪೂರ್ಣ ಗುಣಮುಖವಾದ ನಂತರ, ಸ್ವಾಭಾವಿಕ ಪರಿಸರಕ್ಕೆ ಮರಳಿಸಲಾಗುತ್ತದೆ.ಸರ್ಕಾರದ ಪ್ರಾಣಿ ಜನನ ನಿಯಂತ್ರಣ ಯೋಜನೆ:
ಶಿವಮೊಗ್ಗ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್), ಉಪ ನಿರ್ದೇಶಕ ಡಾಕ್ಟರ್ ಬಸವೇಶ ಹೂಗಾರ್ ಮಾತನಾಡಿ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರಾಳಕೊಪ್ಪ ಪುರಸಭೆಯ ಅಧ್ಯಕ್ಷರಾದ ಮಮತಾ ನಿಂಗಪ್ಪ,ಉಪಾಧ್ಯಕ್ಷ ಮುದಾಸಿರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ, ಇತರರು ಹಾಜರಿದ್ದರು.