ಇನ್ನೂ ಕನ್ನಡ ನಾಮಫಲಕ ಹಾಕದ 32 ಸಾವಿರ ಮಳಿಗೆ

KannadaprabhaNewsNetwork | Published : Jan 31, 2024 2:17 AM

ಸಾರಾಂಶ

ಬೆಂಗಳೂರಿನಲ್ಲಿ ಇನ್ನೂ 32 ಸಾವಿರ ಅಂಗಡಿಗಳು ಕನ್ನಡ ನಾಮಫಲಕ ಹಾಕಿಲ್ಲ ಎಂದಿರುವ ಬಿಬಿಎಂಪಿ ಮುಖ್ಯ ಆಯುಕ್ತರು, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ನಾಮಫಲಕ ಅಳವಡಿಕೆ ಮಾಡದ 49 ಸಾವಿರಕ್ಕೂ ಅಧಿಕ ವ್ಯಾಪಾರಿಗಳಿಗೆ ಬಿಬಿಎಂಪಿ ನೋಟಿಸ್‌ ನೀಡಿದ್ದು, ಈ ಪೈಕಿ ಕೇವಲ 16 ಸಾವಿರ ವ್ಯಾಪಾರಿಗಳು ಮಾತ್ರ ಕನ್ನಡ ನಾಮ ಫಲಕ ಅಳವಡಿಕೆ ಮಾಡಿದ್ದಾರೆ. ಉಳಿದ 32 ಸಾವಿರ ವ್ಯಾಪಾರಿಗಳಿಗೆ ತ್ವರಿತವಾಗಿ ಕನ್ನಡ ನಾಮ ಫಲಕ ಅಳವಡಿಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ಮಂಗಳವಾರ ಕನ್ನಡ ನಾಮಫಲಕ ಅಳವಡಿಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈವರೆಗೆ ಒಟ್ಟು 49,241 ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ. 16,813 ಮಳಿಗೆಗಳು ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿವೆ. 32,428 ಮಳಿಗೆಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕಿದೆ. ಫೆಬ್ರವರಿ ಅಂತ್ಯದೊಳಗಾಗಿ ಎಲ್ಲ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಿಕೊಂಡಿರಬೇಕು. ಈ ಸಂಬಂಧ ಆಯಾ ವಲಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆಯ ‘ಸಹಾಯ 2.0’ರಲ್ಲಿ ಬರುವ ಕಸ, ಬೀದಿ ದೀಪಗಳ ಅಳವಡಿಕೆ ಹಾಗೂ ರಸ್ತೆ ಗುಂಡಿ ಸಮಸ್ಯೆಗಳ ಕುರಿತು ದೂರುಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಬೇಕು ಎಂದು ವಲಯ ಆಯುಕ್ತರಿಗೆ ನಿರ್ದೇಶಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಉಪ ಆಯುಕ್ತ ಮಂಜುನಾಥಸ್ವಾಮಿ, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮೀದೇವಿ, ಅಧಿಕಾರಿಗಳು ಉಪಸ್ಥಿತರಿದ್ದರು.ಮೊದಲು ನೋಟಿಸ್‌, ಬಳಿಕ ಶಿಸ್ತುಕ್ರಮ

ನಗರದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಆದ್ಯತೆ ಮೇರೆಗೆ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಮಳಿಗೆಗಳಿಗೆ ತಿಳುವಳಿಕೆ ಪತ್ರ ನೀಡಿ 7 ದಿನ ಕಾಲಾವಕಾಶ ನೀಡಿದ ಬಳಿಕವೂ ಕನ್ನಡ ನಾಮಫಲಕ‌ ಅಳವಡಿಸದಿದ್ದಲ್ಲಿ ಅಂತಹ ಮಳಿಗೆಯ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತುಷಾರ್‌ ಸೂಚಿಸಿದರು.

Share this article