ಗಬ್ಬು ನಾರುತ್ತಿರುವ ತರಕಾರಿ, ಮೀನು ಮಾರುಕಟ್ಟೆಯ ಶೌಚಾಲಯ

KannadaprabhaNewsNetwork |  
Published : Jul 27, 2026, 02:45 AM IST
ಪೊಟೋ ಪೈಲ್ : 26ಬಿಕೆಲ್1 | Kannada Prabha

ಸಾರಾಂಶ

ಇಲ್ಲಿನ ಹಳೇ ಬಸ್ ನಿಲ್ದಾಣದ ಸನಿಹದ ತರಕಾರಿ, ಮೀನು ಮಾರುಕಟ್ಟೆಯಲ್ಲಿರುವ ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಸೂಕ್ತ ನಿರ್ವಹಣೆಗೆ ಸಾರ್ವಜನಿಕರ ಆಗ್ರಹ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿನ ಹಳೇ ಬಸ್ ನಿಲ್ದಾಣದ ಸನಿಹದ ತರಕಾರಿ, ಮೀನು ಮಾರುಕಟ್ಟೆಯಲ್ಲಿರುವ ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ತರಕಾರಿ, ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಸೇರಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನಗರಸಭೆಯಿಂದ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಇದರ ನಿರ್ವಹಣೆ ಇಲ್ಲದೇ ಹಾಳು ಬೀಳುವಂತಾಗಿದೆ. ಗಬ್ಬು ವಾಸನೆಯಿಂದ ಇಲ್ಲಿ ಹೋಗದ ಪರಿಸ್ಥಿತಿ ಇದೆ. ನಗರಸಭೆಗೆ ಅಂಗಡಿಕಾರರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಶೌಚಾಲಯ ನಿರ್ವಹಣೆಗೆ ಗಮನಹರಿಸದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದ್ದು, ಅಂಗಡಿಕಾರರು, ವ್ಯಾಪಾರಕ್ಕೆ ಬಂದ ಸಾರ್ವಜನಿಕರು ಶೌಚಾಲಯಕ್ಕೆ ಬಂದಾಗ ತೀವ್ರ ತೊಂದರೆ ಪಡುವಂತಾಗಿದೆ. ಇಲ್ಲಿಗೆ ಮೂಗು ಮುಚ್ಚಿಕೊಂಡು ತಮ್ಮ ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳುವಂತಾಗಿದೆ. ಮಳೆಗಾಲ ಇರುವುದರಿಂದ ರೋಗ ರುಜಿನಗಳು ಹರಡಿದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಗರಸಭೆ ದಿನಂಪ್ರತಿ ಈ ಶೌಚಾಲಯದ ನಿರ್ವಹಣೆ ಮಾಡಿದರೆ ಜನರಿಗೆ ಅನುಕೂಲವಾದೀತು. ಗಬ್ಬೆದ್ದು ನಾರುತ್ತಿರುವ ಈ ಶೌಚಾಲಯದ ಬಗ್ಗೆ ನಗರಸಭೆ ಅಧಿಕಾರಿ ವರ್ಗ ಗಂಭೀರ ಕ್ರಮ ಕೈಗೊಳ್ಳಬೇಕಿದೆ.

ಹಳೇ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಇರುವ ಏಕೈಕ ಸಾರ್ವಜನಿಕ ಶೌಚಾಲಯ ಇದಾಗಿದ್ದು, ಇದನ್ನು ಸಮರ್ಪಕ ನಿರ್ವಹಣೆ ಮಾಡಿದರೆ ಅಂಗಡಿಕಾರರು, ಮೀನು ವ್ಯಾಪಾರಸ್ಥರು, ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಭಟ್ಕಳ ಹಳೇ ಬಸ್ ನಿಲ್ದಾಣದ ಸನಿಹದಲ್ಲಿರುವ ತರಕಾರಿ, ಮೀನು ಮಾರುಕಟ್ಟೆಯಲ್ಲಿರುವ ಶೌಚಾಲಯದ ನಿರ್ವಹಣೆಯನ್ನು ನಗರಸಭೆಯವರು ಸಮರ್ಪಕವಾಗಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ ಆಸರಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.