ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿನ ದರ ನಿಗದಿ ಮಾಡುವಂತೆ ಆಗ್ರಹಿಸಿ ಇತ್ತೀಚೆಗೆ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ನಡೆಸಿದ ಹೋರಾಟದ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಚನಗೌಡ ಸಸಾಲಟ್ಟಿ(40), ಪ್ರಶಾಂತ ಮುಗಳಿ(28), ವಿನಾಯಕ ಕೋಟಿವಾಲಿ(25), ಮಲ್ಲಪ್ಪ ಘಟಗಿ(46), ಶಿವಾನಂದ ವಾಣಿ(59), ಸೋಮಯ್ಯ ಹಿರೇಮಠ (46) ಬಂಧಿತ ಆರೋಪಿಗಳು. ಕಲ್ಲು ತೂರಾಟ ಪ್ರಕರಣದಲ್ಲಿ 12 ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಕಲ್ಲು ತೂರಾಟ ನಡೆಸಿದವರು ಯಾರೂ ರೈತರಲ್ಲ, ಅವರೆಲ್ಲ ಕಿಡಿಗೇಡಿಗಳು. ರೈತರ ಪ್ರತಿಭಟನೆ ಹೆಸರಿನಲ್ಲಿ ಗಲಾಟೆ ಮಾಡುವ ಉದ್ದೇಶದಿಂದಲೇ ಬಂದಿದ್ದರು ಎಂದು ತಿಳಿಸಿದರು.
ಪ್ರತಿ ಟನ್ ಕಬ್ಬಿಗೆ ₹ 3500 ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನ.7ರಂದು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತರಗಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರೈತರ ವೇಷದಲ್ಲಿ ಬಂದು ಪೊಲೀಸರ ಮೇಲೆಯೇ ಕಲ್ಲು ತೂರಿದ್ದ ಈ ಕಿಡಿಗೇಡಿಗಳ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿ, ಸಿಸಿಟಿವಿಯ ದೃಶ್ಯಾವಳಿ ಆಧರಿಸಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.ಮನೆಕಳ್ಳತನ, ಓರ್ವನ ಬಂಧನ
ದೀಪಾವಳಿಯ ಹಬ್ಬದಂದು ಮನೆಯ ಮಾಲೀಕರು ಬೆಂಗಳೂರಿಗೆ ಹೋದಾಗ ನಟ ಜಾನ್ ಅಬ್ರಾಹಿಂ ಖಳನಾಯಕ ಪಾತ್ರದಿಂದ ಪ್ರೇರಪಣೆಗೊಂಡು ಧೂಮ್ ಸಿನಿಮಾ ಮಾದರಿಯಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಬೆಳಗಾವಿ ಮಹಾಂತೇಶ ನಗರದ ಸುರೇಶ ನಾಯಿಕ (37) ಬಂಧಿತ ಆರೋಪಿ. ಈತ ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಮನೆ ಕಳ್ಳತನ ಮಾಡಿದ್ದ. ಮನೆಯ ಮಾಲೀಕರು ಬೆಂಗಳೂರಿಗೆ ತೆರಳಿದ್ದ ಮಾಹಿತಿಯನ್ನು ಖಚಿತ ಪಡಿಸಿಕೊಂಡಿದ್ದ ಈತ, ಮನೆಗಳ್ಳ ಸುರೇಶ್ ಮನೆಯ ಬಾಗಿಲು ಮುರಿದು ಟ್ರೇಜರಿಯ ಬಾಗಿಲು ಮುರಿದು ₹ 89 ಲಕ್ಷ ಮೌಲ್ಯದ ಚಿನ್ನ ಹಾಗೂ 8.5 ಕೆ.ಜಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಬಂಧಿತ ಆರೋಪಿಯಿಂದ ಒಟ್ಟು 1280 ಗ್ರಾಂ ಚಿನ್ನ ಮತ್ತು, 8.5 ಕೆಜಿ ಬೆಳ್ಳಿ ಆಭರಣಗಳು, ಒಂದು ಥಾರ್ ಕಾರ್, 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಯಮಕನಮರಡಿ ಠಾಣೆ ಸಿಪಿಐ ಜಾವೇದ ಮುಷಾಪುರೆ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.