ಮಂಡ್ಯ/ಮದ್ದೂರು : ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಅನ್ಯಕೋಮಿನ ಗುಂಪೊಂದು ಕಲ್ಲುತೂರಾಟ ನಡೆಸಿದ್ದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಮತ್ತೆ ಗುಂಪೊಂದು ಎರಡು ಕಡೆ ಕಲ್ಲುತೂರಾಟ ನಡೆಸಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.
ಕೆಮ್ಮಣ್ಣು ನಾಲೆ ವೃತ್ತದ ಬಳಿಯ ಮುಖ್ಯ ಮಸೀದಿ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಭಗವಾ ಧ್ವಜ ಹಾರಿಸುವ ವೇಳೆ ಆ ನಂತರ ಕೆನರಾ ಬ್ಯಾಂಕ್ ವೃತ್ತದ ಚಪ್ಪಲಿ ಅಂಗಡಿ ಬಳಿ ಹಾರಾಡುತ್ತಿದ್ದ ಮುಸ್ಲಿಂ ಧ್ವಜವನ್ನು ಕಿತ್ತೆಸೆದು ಭಗವಾನ್ ಧ್ವಜ ಹಾರಿಸುವ
ಸಮಯದಲ್ಲಿ ಗುಂಪೊಂದು ನಡೆಸಿದ ಕಲ್ಲುತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಎರಡೂ ಕಡೆಯ ಗುಂಪನ್ನು ಚದುರಿಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಲ್ಲಿ ಹಿಂದೂಪರ ಮಹಿಳೆಯೂ ಸೇರಿದಂತೆ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೌಮ್ಯ, ಗಿರೀಶ್, ಪಲ್ಲವಿ ಸೇರಿದಂತೆ ಹಲವರು ಲಾಠಿ ಪ್ರಹಾರದಲ್ಲಿ ಗಾಯಗೊಂಡಿದ್ದಾರೆ.
ಭಾನುವಾರ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೨೧ ಮಂದಿಯನ್ನು ಬಂಧಿಸಿ ಅದರಲ್ಲಿ 14 ಮಂದಿಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ನಡೆದಿದ್ದೇನು?
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಗುಂಪೊಂದು ನಡೆಸಿದ ಗಲಭೆಯನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಸೋಮವಾರ ಪಟ್ಟಣದ ಶ್ರೀಉಗ್ರನರಸಿಂಹಸ್ವಾಮಿ ದೇವಾಲಯದಿಂದ ಹಳೇ ಪೇಟೆಬೀದಿ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಹಿಂದೂ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ರಾಷ್ಟೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಕೆಮ್ಮಣ್ಣು ನಾಲಾ ಸಮೀಪದ ಮುಖ್ಯ ಮಸೀದಿ ಬಳಿ ಬಂದಾಗ ಅಲ್ಲಿ ಕರ್ಪೂರ ಮತ್ತು ಟೈರ್‌ಗೆ ಬೆಂಕಿ ಹಚ್ಚಿ, ಭಗವಾನ್ ಧ್ವಜ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರ ಮೇಲೆ ಒಂದು ಗುಂಪು ಕಲ್ಲು ತೂರಾಟ ಮಾಡಿ ಮಾರಕಾಸ್ತ್ರಗಳನ್ನು ಜಳಪಿಸಿದರು. ಇದರಿಂದ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದಾಗ ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು.
ಮೆರವಣಿಗೆ ಕೆನರಾ ಬ್ಯಾಂಕ್ ಬಳಿ ಬಂದಾಗ ಯುವಕನೊರ್ವ ಚಪ್ಪಲಿ ಅಂಗಡಿ ಬಳಿ ಹಾರಾಡುತ್ತಿದ್ದ ಮುಸ್ಲಿಂ ಧ್ವಜವನ್ನು ಕಿತ್ತೆಸೆದ್ದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಭಗವಾದ್ ಧ್ವಜ ಹಾರಿಸುವ ಸಮಯದಲ್ಲಿ ಗುಂಪೊಂದು ನಡೆಸಿದ ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಘ್ನಗೊಂಡಿತು. ಅಲ್ಲಿಯೂ ಕೂಡ ಗುಂಪನ್ನು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಿ ಮಾತಿನ ಚಕಮಕಿ ನಡೆಸಿದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಲ್ಲುತೂರಾಟ ನಡೆಸಿದಾಗ ಮತ್ತೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಹಿಂದೂಪರ ಮಹಿಳೆಯರು ಸೇರಿ ಒಟ್ಟು 6 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಅಲ್ಲಿಂದ ನೇರವಾಗಿ ಪ್ರವಾಸಿ ಮಂದಿರದ ವೃತ್ತಕ್ಕೆ ಆಗಮಿಸಿದಾಗ ಮತ್ತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮತ್ತೆ ಪ್ರವಾಸಿ ಮಂದಿರ ವೃತ್ತಕ್ಕೆ ಮೆರವಣಿಗೆ ಬಂದಾಗ ಜೊತೆಗೆ ಎಪಿಎಂಸಿ ಮಾರುಕಟ್ಟೆ ವರ್ತಕರು ಪಾಲ್ಗೊಂಡು ಬೆಂಬಲ ಸೂಚಿಸಿದರು. ಅಲ್ಲೂ ಸಹ ಬೆಂಗಳೂರು-ಮೈಸೂರು ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಗುಂಪುಗೂಡಿ ಪ್ರತಿಭಟನೆ ಮಾಡಿ ಮೊನ್ನೆ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲೂಕು ಕಚೇರಿ ಆಗಮಿಸಿದ ಪ್ರತಿಭಟನಾಕಾರರ ಗುಂಪು ಗಣೇಶಮೂರ್ತಿಯೊಂದಿಗೆ ಪೊಲೀಸ್ ಠಾಣೆಗೆ ನುಗ್ಗಲು ವಿಫಲ ಯತ್ನ ನಡೆಸಿದರು. ಆಗ ಪೊಲೀಸರು, ಡಿಎಆರ್ ಹಿಂದೂ ಕಾರ್ಯಕರ್ತರ ಯತ್ನವನ್ನು ತಡೆದು ದಿಗ್ಭಂಧನ ವಿಧಿಸಿದರು. ಕೊನೆಗೆ ಡಿಜೆಯೊಂದಿಗೆ ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹಿಳೆಯರ ಮೇಲೂ ಲಾಠಿ ಪ್ರಹಾರ
ಭಾನುವಾರ ರಾತ್ರಿ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯ ಮನೆಗಳಿಗೆ ಮುಸ್ಲಿಮರು ಕಿರುಕುಳ ನೀಡಿದ್ದನ್ನು ಖಂಡಿಸಿದ ಬಡಾವಣೆಯ ಮಹಿಳೆಯರು ಪ್ರತಿಭಟನಾ ಮೆರವಣಿಗೆಯಲ್ಲಿ ಬರುತ್ತಿದ್ದ ಹಿಂದೂ ಮತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿದರು.
ನಂತರ ಹಲವರು ಮಹಿಳೆಯರೊಂದಿಗೆ ಬಡಾವಣೆಯ ಮಸೀದಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದಾಗ ಮಹಿಳೆಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಿಂದಿಸಿದರು. ಆಗ ಪೊಲೀಸರು ಮಹಿಳೆಯರೆನ್ನದೆ ಲಾಠಿ ಪ್ರಹಾರ ನಡೆಸಿದರು. ಈ ಲಾಠಿ ಪ್ರಹಾರದಲ್ಲಿ ಸೌಮ್ಯ, ಗಿರೀಶ್, ಪಲ್ಲವಿ ಗಾಯಗೊಂಡರು. ಪೊಲೀಸರ ವರ್ತನೆಯನ್ನು ಖಂಡಿಸಿ ಚನ್ನೇಗೌಡ ಬಡಾವಣೆ ಮತ್ತು ರಾಮ್ ರಹೀಂ ನಗರ ಸಂಪರ್ಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಕಲ್ಲು ತೂರಾಟ: 21 ಆರೋಪಿಗಳ ಬಂಧನ
ಭಾನುವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕ ಸಂಬಂಧಿಸಿದಂತೆ ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ 14 ಆರೋಪಿಗಳ ವಿವರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಮಹಮ್ಮದ್ ಅವೇಜ್ ಅಲಿಯಾಸ್ ಮುಳ್ಳು, ಮಹಮದ್ ಇರ್ಫಾನ್ ಅಲಿಯಾಸ್ ಮಿಯಾ, ನವಾಜ್ ಖಾನ್ ಅಲಿಯಾಸ್ ನವಾಜ್, ಇಮ್ರಾನ್‌ಪಾಷಾ ಅಲಿಯಾಸ್ ಇಮ್ರಾನ್, ಉಮರ್ ಫಾರೂಕ್ ಅಲಿಯಾಸ್ ಉಮರ್, ಸೈಯದ್ ದಸ್ತಗೀರ್ ಅಲಿಯಾಸ್ ಸೈಯದ್ ರಶೀದ್, ಖಾಸೀಫ್ ಅಹಮದ್ ಅಲಿಯಾಸ್ ಖಾಸಿಫ್, ಅಹಮದ್ ಸಲ್ಮಾನ್ ಅಲಿಯಾಸ್ ಮುಕ್ಕುಲ್ಲಾ, ಮುಸವೀರ್ ಪಾಷಾ ಅಲಿಯಾಸ್ ಒಡೆಯ, ಕಲಾಂದರ್‌ಖಾನ್, ಮಹಮದ್ ಅಜೀಜ್, ಇನಾಯತ್ ಪಾಷಾ, ಸುಮೇರ್ ಪಾಷಾ, ಮಹಮದ್ ಖಲೀಂ ಅಲಿಯಾಸ್ ಕೈಫ್ ಬಂಧಿತ ಆರೋಪಿಗಳು.