ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ: ಆರು ಮಂದಿ ಬಂಧನ

KannadaprabhaNewsNetwork |  
Published : Sep 17, 2024, 12:49 AM IST
ಕಲ್ಲು ತೂರಾಟ ನಡೆದ ಕಾಟಿಪಳ್ಳ ಮಸೀದಿ. | Kannada Prabha

ಸಾರಾಂಶ

ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1 ಸ್ವಿಫ್ಟ್ ಕಾರು, 2 ಬೈಕು ಹಾಗೂ 4 ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಈದ್‌ ಮಿಲಾದ್‌ ಹಬ್ಬದ ಮುನ್ನಾ ದಿನವಾದ ಭಾನುವಾರ ತಡರಾತ್ರಿ ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಟಿಪಳ್ಳ ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುರತ್ಕಲ್‌ ಕಾನಕಟ್ಲದ ಆಶ್ರಯಸ ಕಾಲೊನಿ ನಿವಾಸಿ ಭರತ್ ಶೆಟ್ಟಿ (26), ಅದೇ ಕಾಲನಿಯ ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್‌ ಮುತ್ತು (19), ಸುರತ್ಕಲ್‌ ಚೇಳಾಯರು ಗ್ರಾಮ ಖಂಡಿಗೆ ಪಾಡಿಯ ನಿತಿನ್‌ ಹಡಪ (22), ಸುರತ್ಕಲ್‌ ಮುಂಚೂರು ಕೊಡಿಪಾಡಿಯ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮ ಈಶ್ವರನಗರ 3ನೇ ಕ್ರಾಸ್‌ ನಿವಾಸಿ ಅಣ್ಣಪ್ಪ ಅಲಿಯಾಸ್‌ ಮನು (24), ಕಾಟಿಪಳ್ಳ 3ನೇ ಬ್ಲಾಕ್‌ನ ಪ್ರೀತಮ್ ಶೆಟ್ಟಿ (34) ಬಂಧಿತರು.

ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿರುವ ಮಜ್ಜಿದುಲ್ಲಾ ಹುದಾ ಜುಮ್ಮಾ ಮಸೀದಿಯಲ್ಲಿ ಸ್ವಯಂ ಸೇವಕರು ಒಟ್ಟುಗೂಡಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಾನುವಾರ ಮಸೀದಿಗೆ ದೀಪಾಲಂಕಾರ ಮಾಡಿ, ರಾತ್ರಿ ಮಸೀದಿಯೊಳಗೆ ಹಬ್ಬದ ಸಿದ್ಧತಾ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಜನತಾ ಕಾಲೊನಿ ಸ್ಮಶಾನದ ಕಡೆಯಿಂದ ಎರಡು ಬೈಕ್‌ಗಳಲ್ಲಿ ಬಂದ ಕಿಡಿಗೇಡಿಗಳು ಮಸೀದಿಯ ಹಿಂಬದಿ ಕಿಟಕಿ ಗಾಜುಗಳಿಗೆ ಕಲ್ಲು ಬಿಸಾಡಿ ಪರಾರಿಯಾಗಿದ್ದರು. ಇದರಿಂದ ಮಸೀದಿಯ ಕಿಟಕಿ ಗಾಜುಗಳಿಗೆ ಹಾನಿ ಉಂಟಾಗಿತ್ತು. ಹಿಂದೂ- ಮುಸ್ಲಿಂ ಜನಾಂಗದ ನಡುವೆ ದ್ವೇಷ ಉಂಟು ಮಾಡುವ ಉದ್ದೇಶದಿಂದ ಮಸೀದಿಗೆ ಕಲ್ಲು ಬಿಸಾಡಿದ್ದಾರೆ ಎಂಬುದಾಗಿ ಮಸೀದಿ ಅಧ್ಯಕ್ಷ ಕೆ.ಎಚ್. ಅಬ್ದುಲ್ ರಹಿಮಾನ್ ಸುರತ್ಕಲ್‌ ಠಾಣೆಗೆ ದೂರು ನೀಡಿದ್ದರು.

ತಕ್ಷಣವೇ ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್‌ ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿಯಿಂದ ಆರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1 ಸ್ವಿಫ್ಟ್ ಕಾರು, 2 ಬೈಕು ಹಾಗೂ 4 ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಆರೋಪಿಗಳ ಪೈಕಿ 1ನೇ ಆರೋಪಿ ಭರತ್ ಶೆಟ್ಟಿ ಮೇಲೆ ಈ ಹಿಂದೆ ಒಟ್ಟು 12 ಪ್ರಕರಣಗಳು, 2ನೇ ಆರೋಪಿ ಚೆನ್ನಪ್ಪ ಶಿವಾನಂದ ಚಲವಾದಿ ಮೇಲೆ 5 ಪ್ರಕರಣ, 3ನೇ ಆರೋಪಿ ನಿತಿನ್ ಹಡಪ ಮೇಲೆ 1 ಪ್ರಕರಣ, 5ನೇ ಆರೋಪಿ ಅಣ್ಣಪ್ಪ ಅಲಿಯಾಸ್‌ ಮನು ಮೇಲೆ 2 ಪ್ರಕರಣ, 6ನೇ ಆರೋಪಿ ಪ್ರೀತಮ್ ಶೆಟ್ಟಿ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.

ಸುರತ್ಕಲ್ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್‌ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ರಾಘವೇಂದ್ರ, ಜನಾರ್ದನ್ ನಾಯ್ಕ, ಎಚ್‌.ಸಿ.ಗಳಾದ ಉಮೇಶ್ ಕೊಟ್ಟಾರಿ, ಅಣ್ಣಪ್ಪ ವಂಡೈ, ದಿಲೀಪ್ ರಾಜೇ ಅರಸ್, ಸಿಬ್ಬಂದಿಗಳಾದ ಕಾರ್ತಿಕ್ ಕುಲಾಲ್, ವಿನೋದ್ ಕುಮಾರ್, ಮಂಜುನಾಥ್ ಆಯಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''