ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಐ ಲವ್ ಮೊಹಮ್ಮದ್ ಫಲಕ ಹಾಕಿರುವುದಕ್ಕೆ ಪ್ರತಿಯಾಗಿ ಹಿಂದು ಯುವಕರು ತಮ್ಮ ಪ್ರದೇಶಗಳಲ್ಲಿ ಐ ಲವ್ ಶ್ರೀರಾಮ ಬ್ಯಾನರ್ ಅಳವಡಿಸಿದ್ದಾರೆ. ಇದರಿಂದಾಗಿ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಹಿಂದು ಯುವಕರು ಐ ಲವ್ ಶ್ರೀರಾಮ ಫಲಕ ಅಳವಡಿಸುವ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಕಾಕತಿವೇಸ್ ರಸ್ತೆಯ ಮಾಬುಸುಬಾನಿ ದರ್ಗಾದ ಉರುಸ್ ವೇಳೆ ಐ ಲವ್ ಮುಹಮ್ಮದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಆಕ್ರೋಶ ಕೂಡ ವ್ಯಕ್ತವಾಗಿದೆ. ಇದನ್ನು ಪ್ರಶ್ನೆ ಮಾಡಿದ ಸ್ಥಳೀಯ ಹಿಂದು ನಿವಾಸಿಗಳ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಪ್ರತಿ ವರ್ಷ ಶನಿವಾರ ಕೂಟ, ಜಾಲಗಾರ ಗಲ್ಲಿ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೆಯೂ ಸಹ ಖಡಕ್ ಗಲ್ಲಿಗೆ ಮೆರವಣಿಗೆ ಎಂಟ್ರಿಯಾಗಿದೆ ಎನ್ನಲಾಗಿದೆ. ಮೆರವಣಿಗೆ ವೇಳೆ ಐ ಲವ್ ಮುಹಮ್ಮದ್ ಎಂಬ ಘೋಷಣೆ ಕೂಗಲಾಗಿದೆ. ಯಾವಾಗಲೂ ಬಾರದ ಮೆರವಣಿಗೆ ಈಗ ಯಾಕೆ ಬಂದಿದೆ? ತಮ್ಮ ಏರಿಯಾಗೆ ಬಂದು ಘೋಷಣೆ ಕೂಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅನ್ಯಕೋಮಿನ ಯುವಕರು ಕಲ್ಲು ತೂರಿದರು. ಬಳಿಕ ತಲ್ವಾರ್ ಕೂಡ ಪ್ರದರ್ಶನ ಮಾಡಿ ಗೂಂಡಾವರ್ತನೆ ಪ್ರದರ್ಶಿಸಿದ್ದರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 11 ಜನರನ್ನು ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು.