ಕನ್ನಡಪ್ರಭ ವಾರ್ತೆ ನಾಗಮಂಗಲ
ಕಲ್ಲು ತೂರಾಟ ನಡೆಸಿದ ಘಟನೆಯಿಂದ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರರು ಕಲ್ಲು ತೂರಾಟ ಮಾಡಿ, ಬಾಟಲಿಗಳನ್ನು ಎಸದೆ ಪರಿಣಾಮ 8 ಮಂದಿ ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದು, ಪೊಲೀಸ್ ಪೇದೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕೈದು ಬಾರಿ ಲಾಠಿ ಪ್ರಹಾರ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದ್ದಾರೆ.ನಾಗಮಂಗಲ ಟಿ.ಬಿ.ಬಡಾವಣೆಯ ಬದರಿಕೊಪ್ಪಲಿನ ಗಜಪಡೆ ಯುವಕರ ಸಂಘದಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಬುಧವಾರ ಸಂಜೆ ಬದರಿಕೊಪ್ಪಲಿನಿಂದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದ ಮೂಲಕ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ತಾಲೂಕು ಕಚೇರಿ ಬಳಿಯ ಮಂಡ್ಯ ಸರ್ಕಲ್‌ಗೆ ಆಗಮಿಸಿದರು.
ಇದರಿಂದ ಉದ್ರಿಕ್ತಗೊಂಡ ಯುವಕರ ಗುಂಪು ಕಿಡಿಗೇಡಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆಗೆ ಮುಸ್ಲಿಂ ಗುಂಪಿನವರೆಲ್ಲರೂ ಒಂದಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಮತ್ತಷ್ಟು ತೀವ್ರವಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರೂ ಕೂಡ ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಮೂರ್ನಾಲ್ಕು ಬಾರಿ ಲಾಠಿ ಪ್ರಹಾರ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಅಲ್ಲಲ್ಲಿ ಗುಂಪುಗೂಡುತ್ತಿದ್ದ ಉಭಯ ಗುಂಪಿನವರು ಕಲ್ಲು ತೂರಾಟದಲ್ಲಿ ನಿರತರಾಗಿದ್ದರು. ಮೆರವಣಿಗೆ ನಡೆಸುತ್ತಿದ್ದ ಯುವಕರ ಗುಂಪು ಪೊಲೀಸ್ ಠಾಣೆ ಬಳಿಗೆ ತೆರಳಿ ಅಲ್ಲೇ ಗಣೇಶ ಮೂರ್ತಿಯನ್ನಿಟ್ಟು ಪ್ರತಿಭಟನೆಗಿಳಿದರು. ಕಲ್ಲು ತೂರಾಟ ನಡೆಸಿ ಘರ್ಷಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಎ.ಆರ್.ಸುಮಿತ್, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿದ್ದರು.
ಹೆದ್ದಾರಿಯಲ್ಲಿ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ವಿದ್ದರು. ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆ ಬದಿಯಲ್ಲಿ ನಿಂತಿದ್ದ ಕೆಲ ವಾಹನಗಳನ್ನು ಜಖಂಗೊಳಿಸಿದ್ದಾರೆ.