ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸೋಮವಾರ ತಡರಾತ್ರಿ ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂ ಮಹಿಳೆ ವಾಸುತ್ತಿರುವ ಮನೆಯ ಮೇಲೆ ಅನ್ಯ ಕೋಮಿನ ಯುವಕರ ತಂಡ ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ಎರಡು ಕೋಮಿನ ಜನ ಜಮಾಯಿಸಿದ್ದರಿಂದಾಗಿ ಸೋಮವಾರ ತಡರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ.
ವಿಜಯಪುರ ಬಡಾವಣೆಯ ಸುಧಾ ಎನ್ನುವರ ಮನೆಯ ಮೇಲೆ ಸೋಮವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಇದರಿಂದ ಭಯ ಬೀತರಾದ ಕುಟುಂಬದವರು ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರು ಅಪ್ರಾಪ್ತರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಜಮಾಸಿದ್ದರಿಂದಾಗಿ ವಿಜಯಪುರ ಬಡಾವಣೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅನ್ಯ ಕೋಮಿನ ನೂರಾರು ಜನ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡರು.
ಕಲ್ಲು ತೂರಾಟ ನಡೆಸಿದ್ದಾರೆ ಎನ್ನರಾದ ಅಪ್ರಾಪ್ತರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತರ ವಿರುದ್ಧ ಕಲ್ಲು ತೂರಾಟಕ್ಕೆ ಒಳಗಾದ ಮನೆ ಮಾಲೀಕರು ಹಾಗೂ ಹಿಂದೂಪರ ಸಂಘಟನೆ ಮುಖಂಡರಾದ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ.ಗೌಡ ಹಲ್ಲೆ ನಡೆಸಿದ್ದಾರೆ ಎಂದು ಅಪ್ರಾಪ್ತರ ಪಾಲಕರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಮುಖಂಡರ ಭೇಟಿ
ಬಾಲಕರ ಮೇಲೆ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ.ಗೌಡ ಹಲ್ಲೆ ನಡೆಸಿಲ್ಲ. ಹುಡುಗರನ್ನು ನಾವು ಹಿಡಿದುಕೊಂಡ ಬಳಿಕ ಅವರು ಸ್ಥಳಕ್ಕೆ ಬಂದಿದ್ದರು. ಈಗ ನೋಡಿದರೆ ಪೊಲೀಸರು ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ ಗೌಡ ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಆ ಹುಡುಗರೇ ಕಲ್ಲು ಹೊಡೆದಿದ್ದನ್ನು ನಾವು ನೋಡಿದ್ದೇವೆ. ಅವರು ಓಡಿಹೋಗುವಾಗ ಹಿಡಿದುಕೊಂಡಿದ್ದೇವೆ.
ಹೆಣ್ಣು ಮಕ್ಕಳ ಸಹಾಯಕ್ಕೆ ತೆರಳಿದ್ದೆವು. ಆದರೆ ಪೊಲೀಸರು ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ತಕ್ಷಣ ನಾವು ಹೆದರಿಕೊಳ್ಳುವುದಿಲ್ಲ. ಇನ್ನಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದೆ ದೊಡ್ಡಮಟ್ಟದ ಅವಘಡ ನಡೆಯುವುದರಲ್ಲಿ ಅನುಮಾನವಿಲ್ಲ.