ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮೇಲೆ ಕಲ್ಲು ತೂರಾಟ

KannadaprabhaNewsNetwork |  
Published : Feb 20, 2026, 03:15 AM IST
ಕಲ್ಲು ತೂರಾಟ | Kannada Prabha

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಗುರುವಾರ ನಗರದಲ್ಲಿ ದಿ‌.ಮರಾಠ ಹಿತಚಿಂತಕ‌ ಸಂಘ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಎಸ್ಪಿ ಸಿದ್ಧಾರ್ಥ ಗೋಯಲ್ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಗುರುವಾರ ರಾತ್ರಿ ಬಾಗಲಕೋಟೆಯ ಕಿಲ್ಲಾದ ಪಂಕಾ ಮಸೀದಿ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಗುರುವಾರ ನಗರದಲ್ಲಿ ದಿ‌.ಮರಾಠ ಹಿತಚಿಂತಕ‌ ಸಂಘ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಎಸ್ಪಿ ಸಿದ್ಧಾರ್ಥ ಗೋಯಲ್ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಗುರುವಾರ ರಾತ್ರಿ ಬಾಗಲಕೋಟೆಯ ಕಿಲ್ಲಾದ ಪಂಕಾ ಮಸೀದಿ ಬಳಿ ನಡೆದಿದೆ.

ಜಿಲ್ಲಾಡಳಿತದಿಂದ ಬೆಳಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಡೆದಿತ್ತು. ಸಂಜೆ ೫ಕ್ಕೆ ಕಿಲ್ಲಾ ಓಣಿಯ ಅಂಬಾ ಭವಾನಿ ದೇವಸ್ಥಾನದಿಂದ‌ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಹೊರಟು ಕಾಯಿಪಲ್ಲೆ ಮಾರುಕಟ್ಟೆ, ಬಸವೇಶ್ವರ ವೃತ್ತದ ಮೂಲಕ ಪಂಕಾ ಮಸೀದಿ ಬಳಿ ಆಗಮಿಸಿದಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಬಂದೋ ಬಸ್ತ್ ನಲ್ಲಿದ್ದ ಎಸ್ಪಿ ಸಿದ್ದಾರ್ಥ ಗೋಯಲ್ ಅವರಿಗೂ ಕಲ್ಲು ತಾಗಿ ಸಮವಸ್ತ್ರದ ಮೇಲೆ ರಕ್ತದ ಕಲೆ ಕಂಡುಬಂದಿದೆ. ಡಿಜೆ ಹೊತ್ತ ಟ್ರ್ಯಾಕ್ಟರ್ ಚಾಲಕನಿಗೂ ಕಲ್ಲು ತಾಗಿದ್ದು, ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. ಘಟನೆ ಮಾಹಿತಿ ನಡೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಮಸೀದಿ ಕಡೆಯಿಂದಲೇ ಕಲ್ಲು ತೂರಿ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಮರಳಿ ಅದೇ ಪ್ರದೇಶದತ್ತ ತೆರಳಲು ಯತ್ನಿಸಿದಾಗ ಪೊಲೀಸರು, ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ರಂಜಾನ್ ಆರಂಭ ಹಿನ್ನೆಲೆಯಲ್ಲಿ ಪಂಕಾ ಮಸೀದಿಯಲ್ಲಿ ಪ್ರಾರ್ಥನೆಗೆ ಅಧಿಕ ಸಂಖ್ಯೆ ಜನ ಸೇರಿದ್ದರು ಎಂದು ತಿಳಿದು ಬಂದಿದೆ. ಡಿವೈಎಸ್ಪಿ ಗಜಾನನ ಸುತಾರ, ಸಿಪಿಐಗಳಾದ ರಾಮಣ್ಣ ಬಿರಾದಾರ, ಅಶೋಕ ಚವಾಣ, ಆನಂದ ವಾಘಮೋಡೆ ಮತ್ತಿತರು ಜನರನ್ನು ಸಮಾಧಾನ ಪಡಿಸಲೆತ್ನಿಸಿದ್ದಾರೆ.‌ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ ಪರಿಸ್ಥಿತಿ ತಿಳಿಯಾಗಿದೆ. ಸ್ಥಳದಲ್ಲಿ ಹಾಗೂ ನಗರದಲ್ಲಿ ಭಾರೀ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಘಟನೆಯಲ್ಲಿ ಯಾವುದೇ ಅನಾಹುತ ಆಗಿಲ್ಲ. ಕಲ್ಲು ತೂರಾಟದಲ್ಲಿ ತಮಗೆ ಯಾವುದೇ ತೊಂದರೆ ಆಗಿಲ್ಲ. ಸಣ್ಣದಾಗಿ ತರಚಿದೆ ಅಷ್ಟೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಸಹಜ ಪರಿಸ್ಥಿತಿ ಇದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌
ಕರ್ಕಶ ಸೌಂಡ್‌ ಸಿಸ್ಟಮ್‌ಗಳ ಮೇಲೆ ಖಾಕಿ ಕಣ್ಣು