ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನೆಪದಲ್ಲಿ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತರುತ್ತಿರುವುದನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಹಿಂದು ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪದಾಧಿಕಾರಿಗಳು ರಾಜ್ಯದಲ್ಲಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿಬಂಧ ಕಾಯ್ದೆಯನ್ನು ಸರ್ಕಾರವೇ ದುರ್ಬಲಗೊಳಿಸುತ್ತಿದೆ. ದಲಿತರೂ, ಒಬಿಸಿಯವರೂ ಸೇರಿದಂತೆ ಹಿಂದು ಜಾತಿಗಳನ್ನು ಒಡೆಯುವುದೇ ಅಹಿಂದ ರಾಜಕಾರಣದ ನೀತಿಯಾಗಿದೆ. ಕುರುಬ ಕ್ರೈಸ್ತ. ಮಡಿವಾಳ ಕ್ರೈಸ್ತ, ಮಾದಿಗ ಕ್ರೈಸ್ತ, ಹೊಲೆಯ ಕ್ರೈಸ್ತ, ಲಿಂಗಾಯತ ಕ್ರೈಸ್ತ, ಒಕ್ಕಲಿಗ ಕ್ರೈಸ್ತ ಸೇರಿದಂತೆ ೪೮ ಹೊಸ ಕ್ರೈಸ್ತ ಜಾತಿಗಳನ್ನು ಸಮೀಕ್ಷೆಯ ಹೆಸರಿನಲ್ಲಿ ಹುಟ್ಟುಹಾಕಿರುವ ಸರ್ಕಾರ ಕ್ಯಾಥೋಲಿಕ್ ಪ್ರೊಟೆಸ್ಟೆಂಟ್, ನ್ಯೂ ಲೈಫ್, ಬ್ಯಾಪ್ಟಿಸ್ಟ್ ಇತ್ಯಾದಿ ಕ್ರೈಸ್ತರ ಮೂಲ ಜಾತಿಗಳನ್ನು ಕೈಬಿಡಲಾಗಿದೆ.ಕಾಂತರಾಜು ಆಯೋಗ, ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ ಸಾಮಾಜಿಕ ನ್ಯಾಯದ ವಿಷಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರ ವಿಶ್ವಾಸಾರ್ಹತ ಕಳೆದುಕೊಂಡಿದೆ. ಎಲ್ಲ ಜಾತಿ, ಸಮುದಾಯದವರು ಅಕ್ಷೇಪ ದಾಖಲಿಸುತ್ತಿದ್ದಾರೆ, ಸರ್ಕಾರದ ನಿರ್ಲಕ್ಷದ ವಿರುದ್ಧ ಜನಾಕ್ರೋಶ ಸ್ಫೋಟಿಸುವ ದಿನ ದೂರವಿಲ್ಲ. ಹಿಂದೂ ಸಮುದಾಯಗಳೊಂದಿಗೆ ಕ್ರೈಸ್ತ ಮತ ಪದ ಸೇರಿಸಿರುವುದನ್ನು ಡ್ರಾಪ್ ಡೌನ್ ಲ್ಲಿಯೂ ಉಳಿಸಿಕೊಳ್ಳಬಾರದು, ಡ್ರಾವ್ ಡೌನ್ ಉಳಿಸಿಕೊಳ್ಳದೆ ಸಂಪೂರ್ಣ ವಾಗಿ ತೆಗೆದು ಹಾಕಬೇಕು ದಲಿತ ಸಮುದಾಯದ (ಅದಿ ಅಂಧರ ಕ್ರೈಸ್ತ, ಆದಿ ಕರ್ನಾಟಕ ಕ್ರೈಸ್ತ, ಆದಿ ದ್ರಾವಿಡ ಕೈಸ್ತ, ಬಂಜಾರ ಕ್ರೈಸ್ತ, ಅಲೆಮಾರಿ ಕ್ರೈಸ್ತ, ಲಂಬಾಣಿ ಕ್ರೈಸ್ತ, ಮಾದಿಗ ಕ್ರೈಸ್ತ, ವಡ್ಡ ಕ್ರೈಸ್ತ, ವಾಲ್ಮೀಕಿ ಕ್ರೈಸ್ತ) ಈ ರೀತಿಯ ಒಟ್ಟು ೧೩ ಉಪಜಾತಿಗಳ ಜೊತೆಗೆ ಕ್ರೈಸ್ತ ಎಂಬ ಪದ ಇನ್ನು ತೆಗೆದುಹಾಕಿಲ್ಲ. ಸಂವಿಧಾನದ ೩೪೧ ವಿಧಿಯಲ್ಲಿ ಇಲ್ಲದ ಈ ರೀತಿಯ ಜೋಡಣೆ ಪದ ತಕ್ಷಣ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಕುಲಗಾಣ ಶಾಂತಮೂರ್ತಿ, ಚಂದ್ರಶೇಖರ್ ರಾವ್, ನಾರಾಯಣ, ಸುಂದರರಾಜ್, ಶಂಕರ್, ರಮೇಶ್ ನಾಯಕ, ರಮೇಶ್ ಎಂ. ಮೊದಲಾದವರು ಇದ್ದರು.