ರೈತರಿಂದ ಸುಲಿಗೆ ನಿಲ್ಲಿಸಿ, ಬದ್ಧತೆಯಿಂದ ಕೆಲಸ ಮಾಡಿ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Jun 05, 2025, 01:11 AM IST
8ಕೆಎಂಎನ್ ಡಿ22 | Kannada Prabha

ಸಾರಾಂಶ

ಇದೇ ವೇಳೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಹರಿಹಾಯ್ದ ಶಾಸಕರು, ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ನಿರಂತರವಾಗಿ ಕಂದಾಯ ಇಲಾಖೆಗೆ ಸುತ್ತುತ್ತಿದ್ದಾರೆ. ಕಟ್ಟಹಳ್ಳಿ ರೈತ ಒಂದು ಆರ್‌ಟಿಸಿ ತಿದ್ದುಪಡಿಗೆ ಕಳೆದ ಮೂರೂವರೆ ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಲು ಆಗಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಂದಾಯ ಮತ್ತು ಸರ್ವೇ ಇಲಾಖೆಗಳಿಂದ ತಾಲೂಕಿನ ರೈತರಿಗೆ ಕಿರುಕುಳವಾಗುತ್ತಿದೆ. ರೈತರ ಸುಲಿಗೆ ನಿಲ್ಲಿಸಿ ಬದ್ಧತೆಯಿಂದ ಕೆಲಸ ಮಾಡದಿದ್ದರೆ ಇಲಾಖೆಯ ರೆವಿನ್ಯೂ ಅಧಿಕಾರಿಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದ ನಂತರ ರೈತರ ಕುಂದುಕೊರತೆ ಪರಿಶೀಲನೆ ನಡೆಸಿ ಮಾತನಾಡಿ, ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರೆವಿನ್ಯೂ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ನೀಡಿದ ಲಿಖಿತ ದೂರುಗಳನ್ನು ಸಭೆಯಲ್ಲಿಟ್ಟು ಮುಖಾಮುಖಿ ಚರ್ಚೆ ನಡೆಸಿದರು.

ಇದೇ ವೇಳೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಹರಿಹಾಯ್ದ ಶಾಸಕರು, ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ನಿರಂತರವಾಗಿ ಕಂದಾಯ ಇಲಾಖೆಗೆ ಸುತ್ತುತ್ತಿದ್ದಾರೆ. ಕಟ್ಟಹಳ್ಳಿ ರೈತ ಒಂದು ಆರ್‌ಟಿಸಿ ತಿದ್ದುಪಡಿಗೆ ಕಳೆದ ಮೂರೂವರೆ ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಲು ಆಗಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ದಬ್ಬಾಳಿಕೆ ಮಾಡುವವರನ್ನು ಕಾನೂನು ಚೌಕಟ್ಟಿನಲ್ಲಿ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಪೌತಿ ಖಾತೆ, ಜಮೀನು ದುರಸ್ತಿಯಂತಹ ಸಣ್ಣಪುಟ್ಟ ಕೆಲಸಗಳಿಗೂ ರೈತರು ಅರ್ಜಿ ಹಿಡಿದು ಶಾಸಕರ ಮನೆ ಬಾಗಿಲಿಗೆ ಬರುತ್ತಿದ್ದಾರೆಂದರೆ ಸರ್ಕಾರಿ ನೌಕರರರಾಗಿ ನೀವು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಗ್ರಾಮ ಆಡಳಿತಾಧಿಕಾರಿಗಳಿಂದ ಹಿಡಿದು ಕಂದಾಯ, ಸರ್ವೇ ಇಲಾಖೆ ಸೇರಿದಂತೆ ಎಲ್ಲಾ ನೌಕರರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಜನರ ಸುಲಿಗೆ ಮಾಡದೆ ತಮ್ಮ ಪಾಲಿನ ಕೆಲಸವನ್ನು ತ್ವರಿತವಾಗಿ ಮಾಡುವಂತೆ ಸೂಚಿಸಿದರು.

ತಾಲೂಕಿನ ವಿಠಲಾಪುರ ವೃತ್ತದಲ್ಲಿ ಗ್ರಾಮ ಆಡಳಿತಾಧಿಕಾರಿ ಈ ಹಿಂದೆ ಕೆಲಸ ಮಾಡುತ್ತಿದ್ದ ಹರಳಹಳ್ಳಿ ವೃತ್ತದಲ್ಲಿ ಮಹಿಳೆಗೆ ಪೌತಿ ಖಾತೆ ಮಾಡಿಕೊಡುವುದಾಗಿ 3 ಸಾವಿರ ರು. ಲಂಚ ಪಡೆದಿದ್ದ ವಿಷಯ ಪ್ರಸ್ತಾಪಿಸಿದ ಶಾಸಕರು, ಬಹಿರಂಗವಾಗಿ ತರಾಟೆಗೆ ತಡೆದುಕೊಂಡರು. ಬಳಿಕ ತನ್ನ ಮನಸ್ಥಿತಿ ಬಂದಲಿಸಿಕೊಳ್ಳುವಂತೆ ಎಚ್ಚರಿಸಿದರು.

ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ತಮ್ಮ ಹಂತದಲ್ಲಿಯೇ ಅಗತ್ಯ ದಾಖಲೆ ಪಡೆದು ರೈತರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪ ವಿಭಾಗಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಪ್ರಕಾಶ್ ಸೇರಿ ಕಂದಾಯ ಮತ್ತು ಸರ್ವೇ ಇಲಾಖೆ ಸಿಬ್ಬಂದಿ ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ