ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ‘ಮಲ್ನಾಡ್ ಫೆಸ್ಟ್’ನ ಮೊದಲ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಭಿನ್ನ ಸಂಸ್ಕೃತಿ ಆಚರಣೆಗಳಿರುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಬದುಕಿನಲ್ಲಿ ಹೆಚ್ಚು ಕಲಿಯಬಹುದು. ತರಗತಿಗಿಂತ ಹೊರಗಿನ ಪ್ರಪಂಚದಲ್ಲಿ ಕಲಿಯುವುದು ಹೆಚ್ಚಿರುತ್ತದೆ. ಪದವಿ ಪ್ರವೇಶ ಪಡೆದು ಮುಗಿಸುವುದರೊಳಗೆ ಶೇ.೫೦ಕ್ಕಿಂತ ಹೆಚ್ಚು ತಂತ್ರಜ್ಞಾನಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ತಂತ್ರಜ್ಞಾನಗಳು ತೀವ್ರಗತಿಯಲ್ಲಿ ಬದಲಾಗುತ್ತಿವೆ ಎಂದು ತಿಳಿಸಿದರು.
ಸಂವಹನ ಕೌಶಲ ಹೊಂದುವುದು ಅತ್ಯಗತ್ಯ. ಜಾತಿ- ಧರ್ಮಾಧಾರಿತ ಸಂಘರ್ಷದಲ್ಲಿ ತೊಡಗಿಕೊಳ್ಳಬೇಡಿ. ಮಾನಸಿಕ ನೆಮ್ಮದಿ ಹಾಳಾಗಲಿದೆ. ವಿದ್ಯಾರ್ಥಿಗಳು ದೊಡ್ಡದಾಗಿ ಕನಸು ಕಾಣಬೇಕು ಎಂದು ಸಲಹೆ ನೀಡಿದರು.ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿ, ಇಂಜಿನಿಯರಿಂಗ್ ಅಧ್ಯಯನದ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗಳಿಗೂ ಸಿದ್ಧತೆ ನಡೆಸಲು ಸಾಧ್ಯವಿದೆ. ಸಮಯ ಪ್ರಕೃತಿ ಕೊಟ್ಟಿರುವ ವರ. ಅದರ ಸದ್ಬಳಕೆ ಮಾಡಿಕೊಂಡು ಅಧ್ಯಯನ ನಡೆಸಿದರೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಬಹುದು ಎಂದರು.
ಎಸ್ಸಿ ಪ್ರಿಂಟ್ ಪ್ಯಾಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಹಳೆ ವಿದ್ಯಾರ್ಥಿ ಚಂದ್ರಶೇಖರ್ ಕೆ. ಆರ್. ಅವರು, ಪ್ರಿಂಟಿಂಗ್ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಇಂದು ೩ ಲಕ್ಷ ಕೋಟಿ ರು. ವಹಿವಾಟು ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ವೃತ್ತಿ ಬದುಕು ಪ್ರಾರಂಭಿಸಿ ನಂತರ ಸ್ವಂತ ಉದ್ಯಮ ಸ್ಥಾಪಿಸಲು ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ, ಉಪಾಧ್ಯಕ್ಷ ಬಿ.ಆರ್.ಗುರುದೇವ್, ಕಾರ್ಯದರ್ಶಿ ಸಿ.ಆರ್.ಜಗದೀಶ್, ಖಜಾಂಚಿ ಪಾರ್ಶ್ವನಾಥ್, ಪ್ರಾಂಶುಪಾಲರಾದ ಡಾ.ಎ.ಜೆ.ಕೃಷ್ಣಯ್ಯ, ಮಲೆನಾಡು ಕಾಲೇಜು ನಿರ್ದೇಶಕ ಡಾ.ಎಸ್.ಪ್ರದೀಪ್, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ನಿರ್ದೇಶಕರಾದ ಡಿ.ಬಿ.ಹೇಮಂತ ಕುಮಾರ್, ಬಿ.ವಿ.ಶ್ರೀನಿವಾಸ್, ಜಿ.ಕೆ.ಶಂಕರ್, ಬಿ.ಆರ್.ರಾಜಶೇಖರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಕೆ.ಎಸ್.ಜಯಂತ, ಡೀನ್ ಡಾ.ಕೆ.ಆರ್.ದುಶ್ಯಂತ್ ಕುಮಾರ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಮೂಡಿ ಬಂದವು.