ನದಿಗೆ ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವಿದ್ದು, ಶಕ್ತಿಯಾಗಿ ಆರಾಧಿಸುವ ಸಂಪದ್ರಾಯ ಹಿಂದೂ ಪರಂಪರೆಯಲ್ಲಿ ಬಂದಿದೆ.
ಕನ್ನಡಪ್ರಭ ವಾರ್ತೆ ಹೊನ್ನಾವರ
ನದಿಗೆ ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವಿದ್ದು, ಶಕ್ತಿಯಾಗಿ ಆರಾಧಿಸುವ ಸಂಪದ್ರಾಯ ಹಿಂದೂ ಪರಂಪರೆಯಲ್ಲಿ ಬಂದಿದೆ. ಶರಾವತಿ ನದಿಯು ಅಮೃತ ಸಮಾನವಾದ ನೀರನ್ನು ಲಕ್ಷಾಂತರ ಜನರಿಗೆ ನೀಡುತ್ತಿದೆ. ನದಿ ಹೋಗಿ ಸಮುದ್ರ ಸೇರುವುದನ್ನು ತಡೆದು ನಿಲ್ಲಿಸುವ ಅನೇಕ ವಿನಾಶಕಾರಿ ಯೋಜನೆ ಜಾರಿ ಮಾಡಲು ಮುಂದಾಗುತ್ತಿರುವುದನ್ನು ತಡೆಯಬೇಕು. ಪ್ರಕೃತಿ ನಾಶ ಮಾಡಿ ಹಲವು ಯೋಜನೆಗಳು ಜಾರಿಗೆ ತರುವುದು ಸರ್ಕಾರದ ಅಭಿವೃದ್ಧಿಯಾ? ಎನ್ನುವ ಪ್ರಶ್ನೆಯನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಸಿದ್ದಾಪುರ ಶ್ರೀಮನ್ನೆಲೆಮಾವಿನಮಠದ ಮಾಧವಾನಂದ ಭಾರತೀ ಶ್ರೀಗಳು ಹೇಳಿದರು.
ಶರಾವತಿ ಆರತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶರಾವತಿ ನದಿಗೆ ಪಂಪ್ಡ ಸ್ಟೋರೆಜ್, ಅಘನಾಶಿನಿ ನದಿ ಇನ್ನೊಂದು ನದಿಗೆ ಸೇರಿಸುವಂತಹ ಹಲವು ಯೋಜನೆಗಳಿಂದ ಜಿಲ್ಲೆಯ ಜನರಿಗೆ ಭವಿಷ್ಯದಲ್ಲಿ ಕಂಟಕವಾಗಲಿದೆ. ನಾವು ಹುಟ್ಟಿದ ಊರನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಪಂಪ್ಡ್ ಸ್ಟೋರೆಜ್ ಯೋಜನೆ ತಾತ್ಕಲಿಕವಾಗಿ ತಡೆ ಸಿಕ್ಕಿದ್ದರೂ, ನಾವು ಶಾಶ್ವತವಾಗಿ ನಿಲ್ಲುವರೆಗೂ ಹೋರಾಟ ಮಾಡಬೇಕು. ನಮ್ಮ ಹೋರಾಟ ಆಡಳಿತ ನಡೆಸುವ ಸರ್ಕಾರಕ್ಕೆ ಬಿಸಿ ಮುಟ್ಟಿದಾಗ ಮಾತ್ರ ಈ ಯೋಜನೆ ನಿಲ್ಲಲಿದೆ. ಉತ್ತರಕನ್ನಡದವರು ಶಾಂತಿಪ್ರಿಯರು, ಶಾಂತವಾಗಿದ್ದವರನ್ನು ಕೆಣಕಿದರೆ ಹೇಗಿರಲಿದೆ ಎನ್ನುವುದನ್ನು ಮುಂದಿನ ದಿನದಲ್ಲಿ ನಾವೆಲ್ಲರೂ ತೋರಿಸುವ ಕಾರ್ಯವಾಗಬೇಕು. ಮೂಲಭೂತವಾಗಿ ಜಿಲ್ಲೆಗೆ ಅಗತ್ಯ ಇರುವ ಆಸ್ಪತ್ರೆ, ವಿಶ್ವವಿದ್ಯಾಲಯ ಅಗತ್ಯವಿದೆ. ನಮಗೆ ಅಗತ್ಯವಿಲ್ಲದ ಜನವಿರೋಧಿ ಯೋಜನೆಗಳ ವಿರುದ್ದ ಎಲ್ಲರೂ ಸಂಘಟಿತರಾಗಿ ಹೋರಾಡೋಣ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಶರಾವತಿ ನದಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ನಡೆದ ಹೋರಾಟದ ಧ್ವನಿಯನ್ನು ವಿಧಾನಸಭೆಯ ಅಧಿವೇಶದಲ್ಲಿ 2 ಬಾರಿ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಟ್ಟಿಸುವ ಕಾರ್ಯ ಮಾಡಿದರೂ, ನಮ್ಮ ಜಿಲ್ಲೆಯ ಇತರೆ ಶಾಸಕರು ಅಧಿವೇಶನದಲ್ಲಿ ಧ್ವನಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಟಾ ಹೆಲ್ತಕೇರ್ ಸೆಂಟರ್ ವೈದ್ಯ ಡಾ. ಜಿ.ಜಿ. ಹೆಗಡೆ ಮಾತನಾಡಿದರು.
ಈ ಸಂದರ್ಭ ಸಮಿತಿಯ ಕಾರ್ಯಧ್ಯಕ್ಷ ಜಿ.ಜಿ. ಶಂಕರ, ಪಪಂ ಮಾಜಿ ಸದಸ್ಯ ಶಿವರಾಜ ಮೇಸ್ತ, ಲೋಕೇಶ ಮೇಸ್ತ, ಲಕ್ಷ್ಮಣ ಮೇಸ್ತ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ತಾರಾ ಭಟ್ ಸಂಗಡಿಗರ ವಾಗ್ದೇವಿ ಭಜನಾ ಮಂಡಳಿಯ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮದ ನಂತರ ಐದು ಸಭಾ ಮಂಟಪದಲ್ಲಿ ಆರತಿ ಬೆಳಗಿಸುವ ಮೂಲಕ ಸಮಿತಿಯಿಂದ ಗೌರವ ಸಲ್ಲಿಸಲಾಯಿತು. ನಂತರ ಸಾರ್ವಜನಿಕರು ನೂರಾರು ಹಣತೆ ಹಚ್ಚಿ ನದಿಯಲ್ಲಿ ತೇಲಿ ಬಿಟ್ಟರು. ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ಸ್ವಾಗತಿಸಿದರು. ಕೇಶವ ನಾಯ್ಕ ಬಳ್ಕೂರ್ ವಂದಿಸಿದರು. ವಿಶ್ವನಾಥ ನಾಯಕ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.