ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸಿ

KannadaprabhaNewsNetwork |  
Published : May 16, 2024, 12:45 AM IST
ಮನವಿ | Kannada Prabha

ಸಾರಾಂಶ

ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ- ಕರ್ನಾಟಕ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‌ ಕುಮಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಎಕ್ಸ್ ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ- ಕರ್ನಾಟಕ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‌ ಕುಮಾರ್‌ಗೆ ಮನವಿ ಸಲ್ಲಿಸಿದರು.ಸಂಘಟನೆ ಸಂಚಾಲಕ ಸಿ.ಯತಿರಾಜು ಮಾತನಾಡಿ, ಹೇಮಾವತಿ ಯೋಜನೆಯ 72 ಕಿಮೀದಿಂದ 197 ಕಿಮೀವರೆಗೆ ನಾಲೆಯ ಆಧುನೀಕರಣ ಕಾಮಗಾರಿ ನಡೆಯುತ್ತಿರುವಾಗಲೇ ನೀರಿನ ಲಭ್ಯತೆ, ದುಂದು ವೆಚ್ಚ, ಭೂಮಿಯ ದುರುಪಯೋಗ ತಪ್ಪಿಸಿ ಮೂಲ ಯೋಜನೆಯ ಆಶಯದಂತೆ ತುಮಕೂರಿಗೆ ಈಗಾಗಲೇ ಹೇಮಾವತಿಯಿಂದ ಬರುವ ನೀರಿನ ಪ್ರಮಾಣ ನಿಗದಿಯಾಗಿದ್ದು, ಅದನ್ನುಆಧಾರವಾಗಿಟ್ಟುಕೊಂಡು ಇಲ್ಲಿಯ ಕೃಷಿ ನಡೆಯುತ್ತಿದೆ ಎಂದರು.ಈ ಪ್ರಮಾಣದ ನೀರನ್ನು ಒದಗಿಸುವುದನ್ನುಖಚಿತಪಡಿಸದೆ ಮತ್ತು ಅದರ ಬಗ್ಗೆ ಹೇಮಾವತಿ ನೀರಿನ ಅವಲಂಬಿತರ ಹಿತಾಸಕ್ತಿಯನ್ನು ಗಾಳಿಗೆ ತೂರುತ್ತಿರುವುದನ್ನು ತಪ್ಪಿಸಲು ಎಕ್ಸ್ ಪ್ರೆಸ್‌ ಕೆನಾಲ್‌ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಹೇಳಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಣಯ ಪುಸ್ತಕಕ್ಕೆ ಸೀಮಿತವಾಗಬಾರದು. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಮೌನಕ್ಕೆ ಶರಣಾಗದೆ ಅತ್ಯಂತ ಪಾರದರ್ಶಕವಾಗಿ ಎಲ್ಲಾ ವಾಸ್ತವಾಂಶಗಳನ್ನು ಅಂಕಿಸಂಖ್ಯೆಗಳ ಸಮೇತ ಸಾರ್ವಜನಿಕವಾಗಿ ಬಿಡುಗಡೆ ಮೂಲಕ ತುಮಕೂರು ಜಿಲ್ಲೆಯ ಜನರ ಆತಂಕ ಪರಿಹರಿಸಬೇಕೆಂದರು.ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಅಜ್ಜಪ್ಪ ಮಾತನಾಡಿ, ಜಿಲ್ಲೆಯ ಹಿತಕ್ಕಾಗಿ ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ನಡೆಸಿ ಮುಂದೆ ವಿವಿಧ ರೀತಿಯ ವಿಶಾಲ ತಳಹದಿಯಲ್ಲಿ ಐಕ್ಯ ಹೋರಾಟಗಳನ್ನು ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಹೇಳಿದರು.ಎಐಕೆಎಸ್ ಸಂಚಾಲಕ ಕಂಬೇಗೌಡ ಮಾತನಾಡಿ, ಮೂಲ ಯೋಜನೆಗೆ ಧಕ್ಕೆತರುವ ಎಕ್ಸ್ ಪ್ರೆಸ್‌ ಕೆನಾಲ್ ಮೂಲಕ ರಾಮನಗರಕ್ಕೆ ನೀರು ಹರಿಸುವ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ನೀರಾವರಿ ಪಣದಾರ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯನ್ನು ಈ ಕೂಡಲೇ ಆರಂಭಿಸಬೇಕೆಂದರು.ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್, ರಾಜ್ಯರೈತ ಸಂಘದ ವೆಂಕಟೇಗೌಡ, ಶಬ್ಬೀರ್, ರಂಗಹನುಮಯ್ಯ, ಜನಾಂದೋಲನ ಸಂಘಟನೆಯ ಜವಾಹರ್, ಎಐಕೆಎಸ್‌ನ ಕಾಂತರಾಜು, ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್ ಸೇರಿದಂತೆ ಮುಂತಾದವರು ನೇತೃತ್ವ ವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ